Yadgiri | 20 ಲಕ್ಷ ರೂ. ವೆಚ್ಚದ ಸಾರ್ವಜನಿಕ ಶೌಚಾಲಯ ಉದ್ಘಾಟನೆ

ಯಾದಗಿರಿ: ಬೆಳೆಯುತ್ತಿರುವ ನಗರದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ವಿವಿಧೆಡೆ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಹೇಳಿದರು.
ನಗರದ ವಾರ್ಡ್ 31ರ ಶಶಿಧರ ಕಾಲೋನಿಯಲ್ಲಿ ನಗರೋತ್ಥಾನ ಹಂತ–3 ಯೋಜನೆಯಡಿ ನಗರಸಭೆ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ನಗರ ಪ್ರದೇಶಗಳಿಗೆ ಹೊರಗಿನಿಂದ ಬರುವ ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳು ಅತ್ಯಗತ್ಯವಾಗಿವೆ. ಶೌಚಾಲಯದ ಕೊರತೆಯಿಂದ ಜನರು ಪರದಾಡುವ ಪರಿಸ್ಥಿತಿ ತಪ್ಪಿಸಲು ಆಯ್ದ ಸ್ಥಳಗಳಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ. ಅವುಗಳನ್ನು ಸಮರ್ಪಕವಾಗಿ ನಿರ್ವಹಿಸುವ ಜವಾಬ್ದಾರಿಯನ್ನೂ ಸಂಬಂಧಪಟ್ಟವರು ವಹಿಸಿಕೊಳ್ಳಬೇಕು ಎಂದು ಹೇಳಿದರು.
ನಗರಸಭೆ ಪೌರಾಯುಕ್ತ ಉಮೇಶ ಚವ್ಹಾಣ ಮಾತನಾಡಿ, ಶೌಚಾಲಯದಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ನೀರಿನ ಸೌಲಭ್ಯಕ್ಕಾಗಿ ಬೋರ್‌ವೆಲ್ ಅಳವಡಿಸಲಾಗಿದ್ದು, ಮೂತ್ರಾಲಯ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ತಿಳಿಸಿದರು.
ಯುಡಾ ಅಧ್ಯಕ್ಷ ಬಾಬುರಾವ ಕಾಡ್ಲೂರ್, ನಗರಸಭೆ ಸಿಬ್ಬಂದಿಗಳಾದ ಪ್ರಶಾಂತ, ಶಂಭುಲಿಂಗ್ ನಾಗರಾಜ್, ಶರಣಮ್ಮ, ಮಂಜುನಾಥ, ಅರುಣ ಸೇರಿದಂತೆ ವಾರ್ಡ್ ಜನರು ಇದ್ದರು.




