Yadgiri | ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

ಯಾದಗಿರಿ: ರಾಯಚೂರು ಜಿಲ್ಲೆಯಲ್ಲಿ ದಲಿತ ಸಮುದಾಯದ ಯುವಕರು ಹಾಗೂ ಮಹಿಳೆಯರ ಮೇಲೆ ನಡೆಯುತ್ತಿರುವ ಕೊಲೆ, ಅತ್ಯಾಚಾರ, ಜಾತಿ ನಿಂದನೆ ಹಾಗೂ ದೌರ್ಜನ್ಯ ಪ್ರಕರಣಗಳನ್ನು ತಡೆಯುವಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿ ದಲಿತ ಸಂಘಟನೆಗಳ ಒಕ್ಕೂಟದ ಶಹಾಪುರ ಘಟಕ ಬೃಹತ್ ಪ್ರತಿಭಟನೆ ನಡೆಸಿತು.
ಪ್ರತಿಭಟನಾಕಾರರು ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ, ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದ ಭೂಮಾನಂದ ಕೊಲೆ, ಸಿರವಾರ ತಾಲೂಕಿನ ಹೊಕ್ರಾಣಿ ಗ್ರಾಮದ ಅಶ್ವಿನಿ ಛಲವಾದಿ ಅತ್ಯಾಚಾರ ಮತ್ತು ಕೊಲೆ, ಲಿಂಗಸುಗೂರು ತಾಲೂಕಿನ ಕರಡಕಲ್ ಗ್ರಾಮದ ರಾಮ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಆಗ್ರಹಿಸಿದರು.
ಸಂತ್ರಸ್ತರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಪ್ರಕರಣಗಳ ತನಿಖೆಯನ್ನು ನಿಷ್ಪಕ್ಷಪಾತವಾಗಿ ಹಾಗೂ ತ್ವರಿತವಾಗಿ ನಡೆಸಬೇಕು. ಆರೋಪಿಗಳು ಯಾವುದೇ ರಾಜಕೀಯ ಪ್ರಭಾವದಿಂದ ತಪ್ಪಿಸಿಕೊಳ್ಳದಂತೆ ಕಠಿಣ ಕಾನೂನು ಕ್ರಮ ಕೈಗೊಂಡು, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
ದಲಿತ ಸಮುದಾಯದ ಮೇಲಿನ ದೌರ್ಜನ್ಯ ತಡೆಗೆ ಜಾರಿಯಲ್ಲಿರುವ ಕಾನೂನುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ನೊಂದ ಕುಟುಂಬಗಳಿಗೆ ತಕ್ಷಣ ಪರಿಹಾರ, ಸರ್ಕಾರದ ನೆರವು ಹಾಗೂ ಕಾನೂನು ಸಹಾಯ ಒದಗಿಸಬೇಕು ಎಂದು ಮನವಿಯಲ್ಲಿ ತಿಳಿಸಿದರು.
ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಕರ್ತವ್ಯಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ, ತಪ್ಪು ಸಾಬೀತಾದರೆ ಕಾನೂನುಬದ್ಧ ಹಾಗೂ ಆಡಳಿತಾತ್ಮಕ ಕ್ರಮ ಕೈಗೊಳ್ಳಬೇಕು. ಅಗತ್ಯವಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು ಎಂದು ದಲಿತ ಸಂಘಟನೆಗಳ ಒಕ್ಕೂಟ ಸರ್ಕಾರವನ್ನು ಆಗ್ರಹಿಸಿತು.
ಈ ಸಂದರ್ಭದಲ್ಲಿ ನೀಲಕಂಠ ಬಡಿಗೇರ, ಬಾಬುರಾವ್ ಭೂತಾಳಿ, ಶಂಕರ್ ಸಿಂಗೆ, ಮಾನಯ್ಯ ಹೊಸ್ಮನಿ, ಮಲ್ಲಪ್ಪ, ಚಂದ್ರು ಚಕ್ರವರ್ತಿ, ಮಹಾದೇವ ದಿಗ್ಗಿ, ರಾಯಪ್ಪ ಸಾಲಿಮನಿ, ಮೋಹನರಾಜಗೌಡ ಕನ್ಯಾಕೋಳ್ಳೂರ, ದೇವಿಂದ್ರಪ್ಪ ಗೌಡೂರ, ಚಂದ್ರಶೇಖರ ಗುತ್ತಿಗೆದಾರ, ಪರಶುರಾಮ ಮಾಲಗತ್ತಿ, ಚಂದ್ರಶೇಖರ ಹತ್ತಿಗುಡುರ, ಲಕ್ಷ್ಮಣ ಹಳಿಸಗರ, ರಾಘು ಹಂಚಿನಾಳ, ದೇವರಾಜ, ನಾಗರಾಜ, ಗೌತಮ್, ಸೇರಿದಂತೆ ಅನೇಕರು ಇದ್ದರು.






