Yadgiri | ಅರಿಕೇರಿ ಕೆ. ಸರ್ಕಾರಿ ಶಾಲೆಯಲ್ಲಿ ಅರ್ಥಪೂರ್ಣ ಮಕ್ಕಳ ದಿನಾಚರಣೆ

ಯಾದಗಿರಿ: ತಾಲೂಕಿನ ಅರಿಕೇರಿ ಕೆ. ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನವೆಂಬರ್ 14ರಂದು ಮಕ್ಕಳ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನದ ಅಂಗವಾಗಿ ಡಾನ್ ಬಾಸ್ಕೋ ಸಮಾಜ ಸೇವಾ ಕೇಂದ್ರದ ನಿರ್ದೇಶಕ ಫಾದರ್ ಶಾಬು ಫ್ರಾನ್ಸಿಸ್ ಅವರ ಮಾರ್ಗದರ್ಶನದಲ್ಲಿ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ವಿಶೇಷವೆಂದರೆ ಇಡೀ ವೇದಿಕೆಯನ್ನು ಮಕ್ಕಳಿಗಾಗಿಯೇ ಮೀಸಲಿಡಲಾಗಿತ್ತು. ಮಕ್ಕಳೇ ಮುಖ್ಯ ಅತಿಥಿಗಳಾಗಿ, ಅಧ್ಯಕ್ಷರಾಗಿ ಹಾಗೂ ಭಾಷಣಕಾರರಾಗಿ ಭಾಗವಹಿಸುವ ಮೂಲಕ ತಮ್ಮ ಪ್ರತಿಭೆ, ಆತ್ಮವಿಶ್ವಾಸ ಮತ್ತು ನಾಯಕತ್ವದ ಗುಣಗಳನ್ನು ಪ್ರದರ್ಶಿಸಿದರು. ಮಕ್ಕಳನ್ನು ಕೇವಲ ಪ್ರೇಕ್ಷಕರನ್ನಾಗಿ ಮಾಡದೆ, ಕಾರ್ಯಕ್ರಮದ ಕೇಂದ್ರಬಿಂದುವಾಗಿಸಿದ ಈ ಪ್ರಯತ್ನ ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಮುಖ್ಯಗುರು ಆನಂದ ಅವರು, ಮಕ್ಕಳ ಮೇಲಿನ ಪಂಡಿತ್ ಜವಾಹರಲಾಲ್ ನೆಹರು ಅವರ ಅಪಾರ ಪ್ರೀತಿ ಮತ್ತು ಕಾಳಜಿಯ ಸ್ಮರಣಾರ್ಥ ಅವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ. ಮಕ್ಕಳು ದೇಶದ ಭವಿಷ್ಯವಾಗಿದ್ದು, ಅವರ ಪ್ರತಿಭೆ, ಶಿಕ್ಷಣ, ಸಂಸ್ಕಾರ ಹಾಗೂ ಸೃಜನಶೀಲತೆಗೆ ಸೂಕ್ತ ಪ್ರೋತ್ಸಾಹ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ಶಿಕ್ಷಕರಾದ ಬಸವರಾಜ್ ಮತ್ತು ಮಹೇಶ್ ಅವರು ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿ ಅಭಿನಂದಿಸಿದರು. ಶಿಕ್ಷಕ-ಶಿಕ್ಷಕಿಯರು ಮಕ್ಕಳೊಂದಿಗೆ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಸಂಭ್ರಮದಲ್ಲಿ ಪಾಲ್ಗೊಂಡಿದ್ದು, ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.
ಡಾನ್ ಬಾಸ್ಕೋ ಸಮಾಜ ಸೇವಾ ಕೇಂದ್ರದ MINDS ಯೋಜನೆಯ ಸಂಯೋಜಕ ಶರಣಪ್ಪ ಅಮರಾಪುರ ಅವರು ಯೋಜನೆಯ ಎರಡನೇ ಹಂತದ ಎರಡು ವರ್ಷಗಳ ಕಾರ್ಯಕ್ರಮದ ಕುರಿತು ಮಕ್ಕಳಿಗೆ ಮಾಹಿತಿ ನೀಡಿದರು. ಮಕ್ಕಳ ಹಾಗೂ ವಯಸ್ಕರ ಮಾನಸಿಕ ಆರೋಗ್ಯದ ಮಹತ್ವವನ್ನು ವಿವರಿಸಿ, ಸಂತೋಷ, ದುಃಖ, ಒತ್ತಡ, ಭಯ ಮತ್ತು ಕೋಪದಂತಹ ಭಾವನೆಗಳನ್ನು ಗುರುತಿಸಿ ಸಮರ್ಥವಾಗಿ ನಿಭಾಯಿಸುವ ವಿಧಾನಗಳ ಕುರಿತು ಅರಿವು ಮೂಡಿಸಿದರು. ಮಾನಸಿಕ ನೆಮ್ಮದಿ ಮತ್ತು ಏಕಾಗ್ರತೆ ವೃದ್ಧಿಸುವ ಉದ್ದೇಶದಿಂದ ಮಕ್ಕಳಿಗೆ ಧ್ಯಾನ ಹಾಗೂ ಪ್ರಾಣಾಯಾಮದ ಸರಳ ಅಭ್ಯಾಸಗಳನ್ನೂ ಮಾಡಿಸಿದರು.
ಕಾರ್ಯಕ್ರಮವನ್ನು ಶಿಕ್ಷಕ ಚಂದ್ರ ನಾಯಕ ನಿರೂಪಿಸಿ, ವಂದನಾರ್ಪಣೆ ಸಲ್ಲಿಸಿದರು. ಕೊನೆಯಲ್ಲಿ ಮಕ್ಕಳಿಗೆ ಸಿಹಿ ವಿತರಿಸುವ ಮೂಲಕ ಕಾರ್ಯಕ್ರಮ ಮುಕ್ತಾಯಗೊಂಡಿತು.






