ಯಾದಗಿರಿ | ಕ್ರಿಮಿನಾಶಕ ಬೆರೆಸುವ ನೀರಲ್ಲಿ ಕಳೆನಾಶಕ ಬೆರೆಸಿದ ಕಿಡಿಗೇಡಿಗಳು: ರೈತನಿಗೆ ಲಕ್ಷಾಂತರ ರೂ. ನಷ್ಟ

ಸುರಪುರ: ರೈತನೊರ್ವ ತನ್ನ ಜಮೀನಿನಲ್ಲಿ ಬೆಳೆದ ತರಕಾರಿ ಬೆಳೆಗೆ ಕ್ರಿಮಿನಾಶಕದೊಂದಿಗೆ ಸಿಂಪಡಿಸಲೆಂದು ಸಂಗ್ರಹಿಸಿಟ್ಟುಕೊಂಡಿದ್ದ ನೀರಲ್ಲಿ ಯಾರೋ ಕಿಡಿಗೇಡಿಗಳು ಕಳೆನಾಶಕ ಬೆರೆಸಿದ ಘಟನೆ ತಾಲೂಕಿನ ಖಾನಾಪು ಎಸ್.ಹೆಚ್ ಗ್ರಾಮ ಪಂಚಾಯತಿಯ ರುಕ್ಮಾಪುರ ಗ್ರಾಮದಲ್ಲಿ ನಡೆದಿದೆ.
ರೈತ ನಾಗರಾಜ ತಳವಾರ ಎನ್ನುವವರು ತನ್ನ ಎರಡುವರೆ ಎಕರೆಯಲ್ಲಿ ಬದನೆ, ಟೊಮೆಟೊ, ಮೆಣಸು ಹಾಗೂ ಸವತೆ ಬೆಳೆಯನ್ನು ಹಾಕಿದ್ದು, ಬೆಳೆಗಳಿಗೆ ರೋಗ ಬಾರದಂತೆ ತಡೆಯಲು ಕ್ರಿಮಿನಾಶ ಸಿಂಪಡಿಸಲು ತಯಾರಿ ಮಾಡಿಕೊಂಡು ಜಮೀನನಲ್ಲಿಯೇ ಬ್ಯಾರಲ್ ಒಂದರಲ್ಲಿ ಜು.3 ರಂದು ನೀರು ಸಂಗ್ರಹಿಸಿದ್ದರು. ಜುಲೈ 4 ರಂದು ಬೆಳಿಗ್ಗೆ ಜಮೀನಿಗೆ ಬಂದು ಸಂಗ್ರಹಿಸಿದ್ದ ನೀರನ್ನು ತೆಗೆದುಕೊಂಡು ಅದರಲ್ಲಿ ಕ್ರಿಮಿನಾಶಕ ಬೆರೆಸಿ ಒಂದುವರೆ ಎಕರೆಯಲ್ಲಿನ ಬೆಳೆಗಳಿಗೆ ಸಿಂಪಡಿಸಿದ್ದಾರೆ.
ನಂತರ ಮಾರನೆ ದಿನ ನೋಡುವುದರಲ್ಲಿ ಎಲ್ಲ ಬೆಳೆಗಳು ಸುಟ್ಟು ಬಾಡಿವೆ. ಸಾಲ ಮಾಡಿ ಲಕ್ಷಾಂತರ ರೂಪಾಯಿ ತಂದು ಬೀಜ, ಗೊಬ್ಬರ, ಕ್ರಿಮಿನಾಶಕ ಖರೀದಿಸಿ ವ್ಯವಸಾಯ ಮಾಡಲು ಮುಂದಾಗಿರುವ ರೈತನಿಗೆ ಕಿಡಿಗೇಡಿಗಳಿಂದ ತುಂಬಾ ನಷ್ಟವಾಗಿದ್ದು, ಜಮೀನಿಗೆ ಭೇಟಿ ನೀಡಿದ ಅನೇಕ ಮುಖಂಡರು ತುಂಬಾ ಬೇಸರ ವ್ಯಕ್ತಪಡಿಸಿ ಇಂತಹ ಕೆಲಸ ಮಾಡಿರುವ ಕಿಡಿಗೇಡಿಗಳನ್ನು ಪೊಲೀಸರು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಕನ್ನಡ ಸೇನೆ ಸಂಘಟನೆಯ ತಾಲೂಕ ಕಾರ್ಯಾಧ್ಯಕ್ಷ ಭಾಗನಾಥ ನಾಯಕ ಗುತ್ತೇದಾರ,ವಿಎಸ್‌ಎಸ್‌ಎನ್ ಅಧ್ಯಕ್ಷ ಶಿವನಗೌಡ ನಾಯಕ,ಗ್ರಾ.ಪಂ ಸದಸ್ಯ ಯಂಕಪ್ಪ ದಾಸರ,ಸಂಗಮೇಶ ಸಿರಗೋಳ ಇತರರು ಜಮೀನಿಗೆ ಭೇಟಿ ನೀಡಬೇಕು ಹಾಗೂ ಸರಕಾರ ರೈತನಿಗೆ ಪರಿಹಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.







