Yadgiri | ಅಯ್ಯಪ್ಪ ಸ್ವಾಮಿ ದೇವಸ್ಥಾನ ಕಾಮಗಾರಿ ಪರಿಶೀಲಿಸಿದ ಶಾಸಕ ಶರಣಗೌಡ ಕಂದಕೂರ

ಯಾದಗಿರಿ: ತಾಲೂಕಿನ ಸೈದಾಪುರ ಹೊರ ವಲಯದಲ್ಲಿನ ನಿರ್ಮಾಣ ಹಂತದಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಕಾಮಗಾರಿಯನ್ನು ಗುರಮಠಕಲ್ ಶಾಸಕ ಶರಣಗೌಡ ಕಂದಕೂರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈಗಾಗಲೇ ಕಾಮಗಾರಿ ಆರಂಭಗೊಂಡು ಸುಮಾರು ಒಂದು ವರ್ಷ ಸಮೀಪಿಸುತ್ತಿದ್ದು, ಸರ್ಕಾರದಿಂದ ಇದುವರೆಗೆ 36 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಭೂಸೇನಾ ನಿಗಮದ ಅಧಿಕಾರಿಗಳು ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು. ಜೊತೆಗೆ ಹೆಚ್ಚುವರಿ ಅನುದಾನ ಬಿಡುಗಡೆಗೆ ಪ್ರಯತ್ನಿಸಲಾಗುವುದು ಎಂದು ಶಾಸಕರು ತಿಳಿಸಿದರು.
ಈ ಭಾಗದಲ್ಲಿ ಅಯ್ಯಪ್ಪ ಸ್ವಾಮಿ ದೇವಸ್ಥಾನ ನಿರ್ಮಾಣವಾಗಬೇಕು ಎಂಬುದು ಭಕ್ತರ ಬಹುದಿನಗಳ ಬೇಡಿಕೆಯಾಗಿತ್ತು. ಅದರಂತೆ ಎಲ್ಲರ ಸಹಕಾರದಿಂದ ಕಾಮಗಾರಿ ಆರಂಭವಾಗಿದ್ದು, ಶೀಘ್ರದಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳು ಅಗತ್ಯ ಮುತುವರ್ಜಿ ವಹಿಸಬೇಕು ಎಂದು ಸೂಚನೆ ನೀಡಿದರು.
ಪರಿಶೀಲನೆ ವೇಳೆ ಭೂಸೇನಾ ನಿಗಮದ ಎಇಇ ಬನ್ನಪ್ಪ ಕೋಮಾರ, ಜೆಇ ಚಂದ್ರಶೇಖರ, ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಷ್‌ಚಂದ್ರ ಕಟಕಟಿ, ಪ್ರಮುಖರಾದ ರಾಜೇಶ ಉಡುಪಿ, ಮಲ್ಲಿಕಾರ್ಜುನ ಅರುಣಿ, ಅಜಯರೆಡ್ಡಿ, ಚಂದ್ರುಗೌಡ ಸೈದಾಪುರ ಹಾಗೂ ಅಯ್ಯಪ್ಪ ಸ್ವಾಮಿ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನಾನು ಸಹ ಅಯ್ಯಪ್ಪ ಸ್ವಾಮಿಯ ಭಕ್ತನಾಗಿದ್ದು, ದೇವಸ್ಥಾನದ ಕಾಮಗಾರಿ ಶೇ.50ರಷ್ಟು ಪೂರ್ಣಗೊಂಡಿದೆ. ತ್ವರಿತವಾಗಿ ಕೆಲಸ ಮುಗಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.
-ಶರಣಗೌಡ ಕಂದಕೂರ, ಗುರಮಠಕಲ್ ಶಾಸಕ






