Yadgiri | ಮುಂಗಾರು ವೈಫಲ್ಯ: ಭರ್ತಿಯಾಗದ ಹತ್ತಿಕುಣಿ ಜಲಾಶಯ; ರೈತರಲ್ಲಿ ಆತಂಕ

ಯಾದಗಿರಿ: ಈ ವರ್ಷ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮುಂಗಾರು ಮಳೆ ನಿರೀಕ್ಷೆಯಂತೆ ಸುರಿಯದ ಪರಿಣಾಮ ಬಹುತೇಕ ಕೆರೆ-ಕಟ್ಟೆಗಳು ನೀರಿಲ್ಲದೆ ಸೊರಗಿದ್ದು, ಶಹಾಪುರ ತಾಲೂಕಿನ ಹತ್ತಿಕುಣಿ ಭಾಗದ ರೈತರ ಜೀವನಾಡಿಯಾಗಿರುವ ಹತ್ತಿಕುಣಿ ಜಲಾಶಯವೂ ಭರ್ತಿಯಾಗದಿರುವುದು ರೈತರಲ್ಲಿ ಆತಂಕ ಮೂಡಿಸಿದೆ.
ಸಕಾಲಕ್ಕೆ ಮಳೆ ಸುರಿಯದ ಕಾರಣ ಹೆಸರು, ತೊಗರಿ, ಹತ್ತಿ, ಸಜ್ಜೆ ಸೇರಿದಂತೆ ಮುಂಗಾರು ಬೆಳೆಗಳು ಸಮರ್ಪಕವಾಗಿ ಬೆಳೆಯದೆ ರೈತರು ಅಪಾರ ನಷ್ಟ ಅನುಭವಿಸುತ್ತಿದ್ದಾರೆ. ಹತ್ತಿಕುಣಿ ಜಲಾಶಯದ ನೀರಾವರಿ ವ್ಯಾಪ್ತಿಯ ಹತ್ತಿಕುಣಿ, ಯಡ್ಡಳ್ಳಿ, ಕಟಗಿ, ಶಹಾಪುರ, ಹೊನಗೇರಾ, ಬಂದಳ್ಳಿ ಹಾಗೂ ದಸ್ಸರಾಬಾದ ಗ್ರಾಮಗಳ ಸುಮಾರು 5,400 ಎಕರೆ ಕೃಷಿಭೂಮಿ ಈ ಜಲಾಶಯವನ್ನು ಅವಲಂಬಿಸಿದೆ.
ಕಳೆದ ವರ್ಷ ಜೂನ್ ಅಂತ್ಯದ ವೇಳೆಗೆ ಉತ್ತಮ ಮಳೆಯಿಂದ ಜಲಾಶಯ ಭರ್ತಿಯಾಗಿತ್ತು. ಜಲಾಶಯದ ಹಸಿರು ಬೆಟ್ಟಗಳ ನಿಸರ್ಗ ಸೌಂದರ್ಯ ವೀಕ್ಷಿಸಲು ಜಿಲ್ಲೆಯ ಹಾಗೂ ಹೊರಜಿಲ್ಲೆಗಳ ಸಾವಿರಾರು ಪ್ರವಾಸಿಗರು ಭೇಟಿ ನೀಡಿದ್ದರು. ಆದರೆ ಈ ಬಾರಿ ಮಳೆಯ ಕೊರತೆಯಿಂದ ಜಲಾಶಯಕ್ಕೆ ಕೇವಲ 5 ಅಡಿ ನೀರು ಮಾತ್ರ ಹರಿದು ಬಂದಿದೆ.
ಕಳೆದ 20 ದಿನಗಳಿಂದ ಮಳೆ ಸುರಿಯದೇ ಮಳೆಗಾಲದಲ್ಲೇ ಬೇಸಿಗೆಯ ವಾತಾವರಣ ನಿರ್ಮಾಣವಾಗಿದೆ. ಮಳೆಗಾಗಿ ರೈತರು ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಭಜನೆಗಳನ್ನು ನಡೆಸಿದರೂ ಪ್ರಯೋಜನವಾಗಿಲ್ಲ. ಈ ವರ್ಷ ಜಲಾಶಯ ಭರ್ತಿಯಾಗುವುದೇ ಎಂಬ ಆತಂಕ ರೈತರನ್ನು ಕಾಡುತ್ತಿದೆ.
ಜಲಾಶಯದ ಕಾಲುವೆಗಳ ನವೀಕರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ 68 ಕೋಟಿ ರೂ. ಮಂಜೂರು ಮಾಡಿದ್ದರೂ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಕಾಮಗಾರಿ ಪೂರ್ಣಗೊಂಡರೆ ಜಲಾಶಯದ ಕೊನೆಯ ಭಾಗದ ರೈತರ ಜಮೀನುಗಳಿಗೂ ನೀರು ತಲುಪಲು ಅನುಕೂಲವಾಗಲಿದೆ.
ಕೇವಲ ಮಳೆ ನೀರನ್ನು ಅವಲಂಬಿಸಿರುವ ಹತ್ತಿಕುಣಿ ಜಲಾಶಯಕ್ಕೆ ಭೀಮಾ ನದಿಯಿಂದ ನೀರು ತುಂಬಿಸುವ ಯೋಜನೆ ಜಾರಿಗೊಳಿಸಬೇಕು ಎಂಬುದು ರೈತರ ಪ್ರಮುಖ ಬೇಡಿಕೆಯಾಗಿದೆ. ಈಗಾಗಲೇ ತಾಲೂಕಿನ 82 ಕೆರೆಗಳಿಗೆ ಭೀಮಾ ನದಿಯಿಂದ ನೀರು ತುಂಬಿಸಲಾಗುತ್ತಿದ್ದು, ಇದೇ ಯೋಜನೆಯನ್ನು ಹತ್ತಿಕುಣಿ ಜಲಾಶಯಕ್ಕೂ ವಿಸ್ತರಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.






