Yadgiri | ಉಮೇಶ್ ಕೆ.ಮುದ್ನಾಳ್‌ಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ

ಯಾದಗಿರಿ: ಜಿಲ್ಲೆಯ ಸಾಮಾಜಿಕ ಹೋರಾಟಗಾರ ಹಾಗೂ ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಉಮೇಶ್ ಕೆ. ಮುದ್ನಾಳ್ ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ, ಬೆಂಗಳೂರಿನ ಆರ್.ಡಿ. ನಗರದಲ್ಲಿರುವ ನಮ್ಮದು ಅಖಂಡ ಕರ್ನಾಟಕ ಸಮರ್ಥ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನವು ಪ್ರತಿಷ್ಠಿತ ನಾಡಪ್ರಭು ಕೆಂಪೇಗೌಡ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಿದೆ.
ಸಾಮಾಜಿಕ ನ್ಯಾಯ, ಜನರ ಸಮಸ್ಯೆಗಳ ಪರಿಹಾರ, ಸಾರ್ವಜನಿಕ ಹಿತಾಸಕ್ತಿ ಹಾಗೂ ವಿವಿಧ ಜನಪರ ಹೋರಾಟಗಳಲ್ಲಿ ಉಮೇಶ್ ಕೆ. ಮುದ್ನಾಳ್ ಅವರು ನಿರಂತರವಾಗಿ ಧ್ವನಿ ಎತ್ತುತ್ತಾ ಬಂದಿದ್ದಾರೆ. ಅವರ ಸಾಮಾಜಿಕ ಕಾಳಜಿ ಹಾಗೂ ಸೇವೆಯನ್ನು ಪರಿಗಣಿಸಿ ಪ್ರತಿಷ್ಠಾನವು ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಜಿಲ್ಲೆಯ ಜನರಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಲಾಗಿದೆ.
ಜನರ ಸಮಸ್ಯೆಗಳಿಗೆ ಸ್ಪಂದಿಸುವುದು, ಆಡಳಿತದ ಗಮನ ಸೆಳೆಯುವುದು ಹಾಗೂ ಮೂಲಸೌಕರ್ಯ ಸೇರಿದಂತೆ ವಿವಿಧ ಸಾರ್ವಜನಿಕ ಸಮಸ್ಯೆಗಳ ಕುರಿತು ಹೋರಾಟ ನಡೆಸುತ್ತಿರುವ ಉಮೇಶ್ ಕೆ. ಮುದ್ನಾಳ್ ಅವರಿಗೆ ಈ ಹಿಂದೆ ಹಲವು ಸಂಘ-ಸಂಸ್ಥೆಗಳಿಂದ ಗೌರವ, ಪ್ರಶಸ್ತಿ ಹಾಗೂ ಸನ್ಮಾನಗಳು ದೊರೆತಿವೆ.
ನಾಡಪ್ರಭು ಕೆಂಪೇಗೌಡರ ಆದರ್ಶ ಹಾಗೂ ಜನಪರ ಚಿಂತನೆಗಳನ್ನು ಪ್ರತಿಬಿಂಬಿಸುವ ಪ್ರಶಸ್ತಿಗೆ ಆಯ್ಕೆಯಾಗಿರುವುದು ತಮ್ಮ ಸಾಮಾಜಿಕ ಸೇವೆಗೆ ಮತ್ತಷ್ಟು ಉತ್ತೇಜನ ನೀಡಿದೆ ಎಂದು ಉಮೇಶ್ ಕೆ. ಮುದ್ನಾಳ್ ತಿಳಿಸಿದ್ದಾರೆ.






