Yadgiri | ಸಮಾನತೆ, ಸಾಮಾಜಿಕ ಸುಧಾರಣೆಗೆ ನಾರಾಯಣ ಗುರುಗಳ ಕೊಡುಗೆ ಅಪಾರ: ಶಾಸಕ ಚೆನ್ನಾರೆಡ್ಡಿ ಪಾಟೀಲ್

ಯಾದಗಿರಿ: ಬ್ರಹ್ಮಶ್ರೀ ನಾರಾಯಣ ಗುರುಗಳು ಮಹಾನ್ ಸಂತ, ದಾರ್ಶನಿಕ ಹಾಗೂ ಸಮಾಜ ಸುಧಾರಕರಾಗಿದ್ದರು ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು.
ನಗರದ ಪದವಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ, ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತ್ಯೋತ್ಸವ ಸಮಿತಿ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಮಾನವನಿಗೆ’ ಎಂಬುದು ನಾರಾಯಣ ಗುರುಗಳ ಪ್ರಸಿದ್ಧ ಸಂದೇಶವಾಗಿತ್ತು. 1888ರಲ್ಲಿ ಅರುವಿಪ್ಪುರಂನಲ್ಲಿ ಶಿವನ ಮೂರ್ತಿಯನ್ನು ಪ್ರತಿಷ್ಠಾಪಿಸುವ ಮೂಲಕ ಕೆಳವರ್ಗದವರೂ ದೇವಸ್ಥಾನ ಪ್ರವೇಶಿಸಿ ಪೂಜೆ ಸಲ್ಲಿಸಬಹುದು ಎಂಬ ಸಂದೇಶವನ್ನು ಸಾರಿದರು. ಸಮಾಜದ ಉದ್ಧಾರಕ್ಕಾಗಿ ಹಗಲಿರುಳು ಶ್ರಮಿಸಿದ ಅವರು, ಶಿಕ್ಷಣದಿಂದ ಸ್ವತಂತ್ರರಾಗಿ ಹಾಗೂ ಸಂಘಟನೆಯಿಂದ ಬಲಶಾಲಿಗಳಾಗಿ ಎಂದು ಜನರಿಗೆ ಕರೆ ನೀಡಿದ್ದರು ಎಂದು ಹೇಳಿದರು.
ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಮಾತನಾಡಿ, ನಾರಾಯಣ ಗುರುಗಳು ಜಗತ್ತಿನ ಶ್ರೇಷ್ಠ ದಾರ್ಶನಿಕರಲ್ಲಿ ಒಬ್ಬರಾಗಿದ್ದು, ಸಮಾನತೆ ಹಾಗೂ ಮಹಿಳಾ ಸಬಲೀಕರಣಕ್ಕಾಗಿ ಅಂದಿನ ಕಾಲದಲ್ಲಿಯೇ ಶ್ರಮಿಸಿದ್ದರು ಎಂದರು.
ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳು ಮಾನವರೆಲ್ಲರೂ ಒಂದೇ ಎಂಬ ಸಂದೇಶ ಸಾರಿದ್ದರು. ಮೂಢನಂಬಿಕೆ ಹಾಗೂ ಕಂದಾಚಾರಗಳ ವಿರುದ್ಧ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಿದ್ದರು. ಅವರ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ವಿಶೇಷ ಉಪನ್ಯಾಸ ನೀಡಿದ ಡಾ. ಸುಭಾಷ್ಚಂದ್ರ ಕೌಲಗಿ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳು 1856ರ ಆಗಸ್ಟ್ 28ರಂದು ಕೇರಳದ ತಿರುವನಂತಪುರಂ ಸಮೀಪದ ಚೆಂಬಜಂತಿ ಗ್ರಾಮದಲ್ಲಿ ಜನಿಸಿದರು. ತಂದೆ ಮಾದನ್ ಆಶಾನ್ ಹಾಗೂ ತಾಯಿ ಕುಟ್ಟಿಯಮ್ಮ. ಬಾಲ್ಯದಲ್ಲಿ ‘ನಾನು’ ಎಂದು ಕರೆಯಲ್ಪಡುತ್ತಿದ್ದ ಅವರು ಸ್ಥಳೀಯವಾಗಿ ಸಂಸ್ಕೃತ, ತಮಿಳು ಹಾಗೂ ಆಯುರ್ವೇದವನ್ನು ಕಲಿತರು. ಬಳಿಕ ವೇದ ಹಾಗೂ ಉಪನಿಷತ್ತುಗಳನ್ನು ಅಧ್ಯಯನ ಮಾಡಿದರು. ಮಲಯಾಳಂ, ಸಂಸ್ಕೃತ ಹಾಗೂ ತಮಿಳು ಭಾಷೆಗಳಲ್ಲಿ ಹಲವು ಆಧ್ಯಾತ್ಮಿಕ ಕೃತಿಗಳನ್ನು ರಚಿಸಿದ್ದು, ‘ದೈವ ದಶಕಂ’ ಅವರ ಪ್ರಸಿದ್ಧ ಪ್ರಾರ್ಥನಾ ಗೀತೆಯಾಗಿದೆ ಎಂದು ವಿವರಿಸಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಸೋಲೂರು ಸಂಸ್ಥಾನದ ಮಠದ ವಿಖ್ಯಾತನಂದ ಸ್ವಾಮೀಜಿ ಮಾತನಾಡಿ, ಸುಮಾರು ನೂರು ವರ್ಷಗಳ ಹಿಂದೆ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿ ಜನರಲ್ಲಿ ಜಾಗೃತಿ ಮೂಡಿಸಿದ ನಾರಾಯಣ ಗುರುಗಳ ಬದುಕು ಹಾಗೂ ಕ್ರಾಂತಿಕಾರಿ ವಿಚಾರಗಳು ಎಂದಿಗೂ ಅಮರವಾಗಿರುತ್ತವೆ ಎಂದರು.
ಅಪರ ಜಿಲ್ಲಾಧಿಕಾರಿ ರಮೇಶ ಕೊಲಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರ ಅಳ್ಳಿಳಿ, ಈಡಿಗ ಸಮಾಜದ ಜಿಲ್ಲಾಧ್ಯಕ್ಷ ಮಹೇಂದ್ರ ಕುಮಾರ್ ಅನಪೂರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರದೇವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇಶಾ ಪಡಿಶೆಟ್ಟಿ ಅವರ ಭರತನಾಟ್ಯ ಗಮನ ಸೆಳೆಯಿತು. ಮಾರುತಿ ಕಲಾಲ್ ಸ್ವಾಗತಿಸಿದರು. ಡಾ. ಗುರುಪ್ರಸಾದ್ ವೈದ್ಯ ನಿರೂಪಿಸಿದರು. ಹನುಮಯ್ಯ ನೀಡಜಂತಿ ವಂದಿಸಿದರು.






