ಯಾದಗಿರಿ | ಜು.12 ರಂದು ರಾಷ್ಟ್ರೀಯ ಲೋಕ್ ಅದಾಲತ್ : ನ್ಯಾ.ಮರುಳಸಿದ್ದಾರಾಧ್ಯ

ಯಾದಗಿರಿ : ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ಜು.12 ರಂದು ( ಎರಡನೇ ಶನಿವಾರ) ಜಿಲ್ಲೆಯ ಎಲ್ಲ ನ್ಯಾಯಲಯಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಮರುಳಸಿದ್ದಾರಾಧ್ಯ ಎಚ್.ಜೆ. ಅವರು ಹೇಳಿದರು.
ಬುಧವಾರ ಬೆಳಗ್ಗೆ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಕರೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರು ತಮ್ಮ ವ್ಯಾಜ್ಯ ಪೂರ್ವ ಮತ್ತು ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಈ ಲೋಕ ಅದಾಲತ್ ನಲ್ಲಿ ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಬೇಕೆಂದರು.
ಕಳೆದ ಬಾರಿ ಅಂದರೆ 2025 ಮಾ.8ರಂದು ನಡೆದ ಲೋಕ ಅದಾಲತ್ ನಲ್ಲಿ ಸಂಧಾನಕ್ಕೆ ಒಳಪಡಲು ಇದ್ದ ಒಟ್ಟು 8,800 ಪ್ರಕರಣಗಳಲ್ಲಿ 5,207 ಪ್ರಕರಣಗಳು ರಾಜಿ ಮೂಲಕ ಸಂಧಾನ ಮಾಡುವ ಮೂಲಕ ಶೇ.70 ರಷ್ಟು ಗುರಿ ತಲುಪಲಾಗಿದೆ ಎಂದ ಅವರು, ಈ ಸಲ ಸುಮಾರು 15,000 ಪ್ರಕರಣಗಳು ಇದ್ದು, ಸಾಧ್ಯವಾದಷ್ಟು ಹೆಚ್ಚಿನ ಪ್ರಕರಣಗಳು ರಾಜಿ ಸಂಧಾನ ಮಾಡಿಕೊಳ್ಳಲು ಕಕ್ಷಿದಾರರಿಗೆ ಮತ್ತು ವಕೀಲರಿಗೆ ಸೂಚಿಸಲಾಗಿದೆ ಎಂದರು.
ಇದೊಂದು ಕಡಿಮೆ ಖರ್ಚಿನಲ್ಲಿ ಶೀಘ್ರ ತಿರ್ಮಾನದ ವಿಶೇಷ ಅವಕಾಶವಿರುವ ಅದಾಲತ್ ಆಗಿದ್ದು, ನ್ಯಾಯಾಲಯದಲ್ಲಿ ದಾಖಲಾಗದ ಪ್ರಕರಣಗಳು ಸಹ ಇಲ್ಲಿ ರಾಜಿ ಸಂಧಾನ ಮೂಲಕ ಬಗೆಹರಿಸಿಕೊಳ್ಳಲು ಅವಕಾಶವಿದೆ ಎಂದು ನ್ಯಾಯಾಧೀಶರು ಹೇಳಿದರು.
ರಾಜಿಯಾಗಬಲ್ಲ ಅಪರಾಧಿಕ, ಬ್ಯಾಂಕ್ ವಸೂಲಾತಿ, ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಸಿದ, ಸಾಲ ವಸೂಲಾತಿ, ಖಾಯಂ ಜನತಾ ನ್ಯಾಯಾಲಯದಲ್ಲಿ ಬಾಕಿ ಇರುವ ಹಾಗೂ ಚೆಕ್ಕು ಅಮಾನ್ಯದ, ಮೋಟಾರು ಅಪಘಾತ ಪರಿಹಾರ, ಕಾರ್ಮಿಕ ವಿವಾದ, ವಿದ್ಯುತ್ ಹಾಗೂ ನೀರಿನ ಶುಲ್ಕ, ಭೂಸ್ವಾಧಿನ, ವೈವಾಹಿಕ - ಕುಟುಂಬ ನ್ಯಾಯಾಲಯ ಮತ್ತು ರಾಜಿಯಾಗಬಲ್ಲ ಸಿವಿಲ್ ಹಾಗೂ ಇತರೇ ಎಲ್ಲ ಪ್ರಕರಣಗಳು ಈ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ರಾಜಿಸಂಧಾನ ಮಾಡಿಕೊಳ್ಳಲು ಅವಕಾಶವಿದೆ ಎಂದು ನ್ಯಾ.ಮರುಳಸಿದ್ದಾರಾಧ್ಯ ಅವರು ಹೇಳಿದರು.
ಜಿಲ್ಲೆಯ ಒಟ್ಟು 12 ಕೋರ್ಟ್ ಗಳಲ್ಲಿ ಜು.12 ರಂದು ಈ ಲೋಕ್ ಅದಾಲತ್ ನಡೆಯಲಿದೆ. ಇದೊಂದು ಸುವರ್ಣಾವಕಾಶವಿದ್ದು, ಇದರ ಉಪಯೋಗವನ್ನು ಮಾಡಿಕೊಳ್ಳಬೇಕೆಂದು ನ್ಯಾ.ಮರಿಯಪ್ಪ ಅವರು ಹೇಳಿದರು.
ಈ ವೇಳೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸಿ.ಎಸ್.ಮಾಲಿಪಾಟೀಲ ಉಪಸ್ಥಿತರಿದ್ದರು.







