ಯಾದಗಿರಿ | ಅಮಾಯಕರ ಸಾವಿಗೆ ಕಾರಣವಾದ ಆಸ್ಪತ್ರೆ ವಿರುದ್ಧ ಕ್ರಮಕ್ಕೆ ನಮ್ಮ ಕರ್ನಾಟಕ ಸೇನೆ ಆಗ್ರಹ

ಯಾದಗಿರಿ : ನಗರದ ಡಾ.ಎಸ್.ಎಂ.ಬಿರಾದಾರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಗುವಿನ ಸಾವಿಗೆ ಸಂಬಂಧಿಸಿದಂತೆ ಎಫ್.ಐ.ಆರ್. ದಾಖಲಾಗಿದ್ದು, ಈ ಪ್ರಕರಣಗಳಿಗೆ ಸಂಬಂಧಿಸಿದಂತೆ 5 ಜನರ ವಿರುದ್ಧ ಎಫ್.ಐ.ಆರ್. ಆಗಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ನಮ್ಮ ಕರ್ನಾಟಕ ಸೇನೆ ಜಿಲ್ಲಾ ಘಟಕ ದೂರಿದೆ.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶ್ರೀದೇವಿ ಎನ್.ಕಟ್ಟಮನಿ ಮಾತನಾಡಿ, ಆಸ್ಪತ್ರೆಯಿಂದ ಈಗಾಗಲೇ ಇಂತಹ ಪ್ರಕರಣಗಳು ವರದಿಯಾಗುತ್ತಿದೆ. ಈ ಎಲ್ಲಾ ಘಟನೆಗಳಿಗೆ ಆಸ್ಪತ್ರೆ ವೈದ್ಯರು ಹಾಗೂ ಹೆಚ್ಚುವರಿ ಔಷಧ ನಿಯಂತ್ರಕರು ಸೇರಿದಂತೆ 5 ಜನರ ಮೇಲೆ ಯಾದಗಿರಿ ನಗರ ಠಾಣೆಯಲ್ಲಿ ಕಳೆದ ಮಾರ್ಚ ತಿಂಗಳಲ್ಲಿಯೇ ಪ್ರಕರಣ ದಾಖಲಾಗಿದೆ.
ಈಗಾಗಲೇ ಮಾನವಹಕ್ಕುಗಳ ಆಯೋಗ ಡಿಎಚ್‌ಓ ಕಚೇರಿಯವರು ಭೇಟಿ ನೀಡಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಕೂಡಲೇ 10 ದಿನದಲ್ಲಿ ಆಸ್ಪತ್ರೆ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಆಸ್ಪತ್ರೆಗೆ ಮುಳ್ಳುಬೇಲಿ ಹಚ್ಚಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮದ ಭರವಸೆ ನೀಡಿದರು.