ಯಾದಗಿರಿ | ಕೇಂದ್ರದಿಂದ ದ್ವೇಷದ ರಾಜಕೀಯ : ಭೀಮಣ್ಣ ಮೇಟಿ ಆರೋಪ

ಯಾದಗಿರಿ: ಕೇಂದ್ರ ಸರಕಾರ ಸಚಿವ ಪ್ರಿಯಾಂಕ್ ಖರ್ಗೆ ಅವರ ಮೇಲೆ ದ್ವೇಷದ ರಾಜಕೀಯ ಮಾಡುತ್ತಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ.ಭೀಮಣ್ಣ ಮೇಟಿ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನಾಡಿನ ಅಭಿವೃದ್ಧಿಗಾಗಿ ಸಚಿವರು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಇದನ್ನು ಸಹಿಸಿಕೊಳ್ಳಲು ಕೇಂದ್ರ ಸರಕಾರಕ್ಕೆ ಆಗುತ್ತಿಲ್ಲ. ಹೀಗಾಗಿಯೇ ಅವರ ವಿರುದ್ಧ ಪಿತೂರಿ ರಾಜಕೀಯ ಮಾಡುವ ಮೂಲಕ ಸಣ್ಣತನ ಪ್ರದರ್ಶನ ಮಾಡುತ್ತಿರುವುದು ನಾಚಿಗೇಡು ಸಂಗತಿಯಾಗಿದೆ ಎಂದು ಹೇಳಿದರು.
ಅಮೆರಿಕಾ ಪ್ರವಾಸಕ್ಕೆ ಸಚಿವರು ಹೋಗಬೇಕಿತ್ತು. ಎರಡು ದಿನಗಳ ಕಾಲ ತಂತ್ರಜ್ಞಾನ ಶೃಂಗ ಸಭೆಯಲ್ಲಿ ಸರಕಾರದ ಪ್ರತಿನಿಧಿಯಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಭಾಗಿಯಾಗಬೇಕಿತ್ತು. ಆದರೆ ಇದರಲ್ಲಿಯೂ ದ್ವೇಷದ ರಾಜಕೀಯ ಮಾಡಿದ ಪರಿಣಾಮವಾಗಿ ಸಚಿವರು ಅಮೆರಿಕಾಕ್ಕೆ ಹೋಗಲು ಆಗಲಿಲ್ಲ. ನಾಡಿಗೆ ಕೇಂದ್ರ ಸರಕಾರ ಅವಮಾನ ಮಾಡಿದೆ ಎಂದು ದೂರಿದರು.
ಕೇಂದ್ರ ಸರಕಾರ ಅಧಿಕಾರವನ್ನು ಸಂಪೂರ್ಣವಾಗಿ ದುರ್ಬಳಕೆ ಮಾಡಿಕೊಳ್ಳುವ ಮೂಲಕ ಸಂವಿಧಾನದ ಆಶಯಗಳಿಗೆ ಕೊಡಲಿ ಪೆಟ್ಟು ನೀಡುತ್ತಿದೆ. ಅಂಬೇಡ್ಕರ್ ವಾದಿಗಳಿಗೆ ಅನ್ಯಾಯ ಮಾಡಿದೆ. ಇದರಲ್ಲಿಯೂ ಮನುವಾದ ಹುಡುಕುವ ಕೆಲಸ ನಡೆಯುತ್ತಿದೆ ಎಂದು ತಿಳಿಸಿದರು.







