ಯಾದಗಿರಿ | ಕೈಗಾರಿಕಾ ಪ್ರದೇಶಗಳಲ್ಲಿ ಸೌಲಭ್ಯ ಒದಗಿಸಿ, ಉತ್ತೇಜಿಸಿ: ಜಿಲ್ಲಾಧಿಕಾರಿ ಹರ್ಷಲ್ ಭೋಯರ್

ಯಾದಗಿರಿ: ಜಿಲ್ಲೆಯ ಕೈಗಾರಿಕಾ ಪ್ರದೇಶಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳಾದ ರಸ್ತೆ ಸೇರಿದಂತೆ ವಿವಿಧ ಸೇವೆಗಳು ಹಾಗೂ ಸೌಲಭ್ಯಗಳನ್ನು ಒದಗಿಸಿ ಕೈಗಾರಿಕಾ ವಲಯವನ್ನು ಉತ್ತೇಜಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಹರ್ಷಲ್ ಭೋಯರ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆ.5ರ ಮಂಗಳವಾರ ದಂದು ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಕಡೇಚೂರು-ಬಾಡಿಯಾಳ ಕೈಗಾರಿಕಾ ಪದೇಶದಲ್ಲಿ ವಿವಿಧ ಸೌಲಭ್ಯ ಒದಗಿಸುವ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಕೈಗಾರಿಕೆ ಪ್ರದೇಶದಲ್ಲಿ ಕೈಗಾರಿಕೆಗಳು ಸುಗಮವಾಗಿ ಕಾರ್ಯನಿರ್ವಹಿಸಲು ಮತ್ತು ಈ ಪ್ರದೇಶದ ಸುತ್ತ-ಮುತ್ತ ವಾಸವಿರುವ ಸಾರ್ವಜನಿಕರ ಆರೋಗ್ಯ ಮತ್ತು ಪರಿಸರ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಸೂಚಿಸಿದರು.
ಯಾವುದೇ ತರಹದ ವಾಹನಗಳು ಕೆಮಿಕಲ್ ತ್ಯಾಜ್ಯವನ್ನು ವಿಲೇವಾರಿ, ಮಾಡುವುದು ಕಂಡುಬಂದಲ್ಲಿ ಸಂಬಂಧಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಕೈಗಾರಿಕೆ ಪ್ರದೇಶ ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಯಲ್ಲಿ ಪೋಲಿಸ್ ಕಾವುಲು ನೇಮಿಸಿ ಗಸ್ತು ಮಾಡಲು ಕ್ರಮವಹಿಸಬೇಕು.
ಈ ಕೈಗಾರಿಕೆ ಪ್ರದೇಶದಲ್ಲಿ ಭಾರಿವಾಹನಗಳು ವಿಶೇಷವಾಗಿ ತ್ಯಾಜ್ಯ ನೀರು, ಅಪಾಯಕಾರಿ ತ್ಯಾಜ್ಯ ಮತ್ತು ಇತರೆ ಕೆಮಿಕಲ್ ಸಾಗಿಸುವ ವಾಹನಗಳು ಒಂದೇ ಗೇಟಿನ ಮೂಲಕ ಒಳ ಮತ್ತು ಹೊರಗೆ ಚಲಿಸಲು ಒಂದು ನಿರ್ದಿಷ್ಟ ಗೇಟ್‌ನ್ನು ಆಳವಡಿಸಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ರಮೇಶ ಕೋಲಾರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸತೀಶ್ ಕುಮಾರ್, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.







