Yadgiri | ಖಾಲಿ ಕೊಡ ಹಿಡಿದು ತಾಂಡದ ನಿವಾಸಿಗಳಿಂದ ಪ್ರತಿಭಟನೆ
ಮೂಲಸೌಲಭ್ಯಗಳಿಲ್ಲದೆ ಲಿಂಗೇರಿ, ಮಲ್ಹಾರ ತಾಂಡಗಳ ನಿವಾಸಿಗಳ ಪರದಾಟ: ಉಮೇಶ ಮುದ್ನಾಳ್ ಆರೋಪ

ಯಾದಗಿರಿ: ಸ್ವಾತಂತ್ರ್ಯ ಬಂದು 78 ವರ್ಷಗಳು ಕಳೆದರೂ ಯಾದಗಿರಿ ತಾಲೂಕಿನ ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಮಲ್ಹಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಿಂಗೇರಿ ಮತ್ತು ಮಲ್ಹಾರ ತಾಂಡಗಳು ಇನ್ನೂ ಮೂಲಸೌಲಭ್ಯಗಳಿಂದ ವಂಚಿತವಾಗಿವೆ. ಶುದ್ಧ ಕುಡಿಯುವ ನೀರು, ರಸ್ತೆ, ಚರಂಡಿ ಸೇರಿದಂತೆ ಅಗತ್ಯ ಸೌಲಭ್ಯಗಳಿಲ್ಲದೆ ನಿವಾಸಿಗಳು ಸಂಕಷ್ಟ ಎದುರಿಸುತ್ತಿದ್ದು, ಕಲುಷಿತ ವಾತಾವರಣದಿಂದ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ ಎಂದು ಸಾಮಾಜಿಕ ಹೋರಾಟಗಾರ ಹಾಗೂ ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ್ ಆರೋಪಿಸಿದರು.
ರವಿವಾರ ಬೆಳಗ್ಗೆ ತಾಂಡಗಳಿಗೆ ದಿಢೀರ್ ಭೇಟಿ ನೀಡಿ, ಕಾಲ್ನಡಿಗೆಯಲ್ಲಿ ಸಂಚರಿಸಿ ಅಲ್ಲಿನ ದುಸ್ಥಿತಿಯನ್ನು ಪರಿಶೀಲಿಸಿದ ಅವರು, ಬಳಿಕ ಖಾಲಿ ಕೊಡಗಳನ್ನು ಹಿಡಿದು ಮಹಿಳೆಯರು ಹಾಗೂ ನಿವಾಸಿಗಳೊಂದಿಗೆ ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ ನಡೆಸಿದರು.
ತಾಂಡಗಳಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಕೊಳಚೆ ನೀರು ತಗ್ಗು ಪ್ರದೇಶಗಳಲ್ಲಿ ಸಂಗ್ರಹವಾಗುತ್ತಿದೆ. ಸ್ವಚ್ಛತೆಯ ಕೊರತೆಯಿಂದ ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದು, ಡೆಂಗ್ಯೂ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ಎದುರಾಗಿದೆ. ಕುಡಿಯುವ ನೀರಿನ ಬೋರ್‌ವೆಲ್‌ಗಳು ಕೆಟ್ಟು ನಿಂತಿದ್ದರೂ ದುರಸ್ತಿಗೆ ಅಧಿಕಾರಿಗಳು ಮುಂದಾಗಿಲ್ಲ. ಹತ್ತು ವರ್ಷಗಳ ಹಿಂದೆ ನಿರ್ಮಿಸಿರುವ ಕಿರು ಕುಡಿಯುವ ನೀರಿನ ಟ್ಯಾಂಕ್ ಕೂಡ ಇನ್ನೂ ಬಳಕೆಗೆ ಬಂದಿಲ್ಲ ಎಂದು ದೂರಿದರು.
ತಾಂಡದಲ್ಲಿರುವ ವಿದ್ಯುತ್ ಪರಿವರ್ತಕ ಸುಟ್ಟುಹೋಗಿದ್ದು, ನಿವಾಸಿಗಳು ಕತ್ತಲೆಯಲ್ಲಿ ಬದುಕುವಂತಾಗಿದೆ. ಸಿಸಿ ರಸ್ತೆ, ಚರಂಡಿ ಹಾಗೂ ಮಹಿಳೆಯರಿಗೆ ಶೌಚಾಲಯ ಸೌಲಭ್ಯಗಳಿಲ್ಲ. ಮುಖ್ಯ ರಸ್ತೆಯಿಂದ ತಾಂಡಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಜಾಲಿಗಿಡಗಳು ಬೆಳೆದು, ತಗ್ಗು ಗುಂಡಿಗಳು ನಿರ್ಮಾಣವಾಗಿವೆ. ಇದರಿಂದ ಸಾರ್ವಜನಿಕರು ಹಾಗೂ ರೈತರು ಸಂಚರಿಸಲು ತೀವ್ರ ತೊಂದರೆಯಾಗುತ್ತಿದೆ. ತಾಂಡಗಳಲ್ಲಿ ಸ್ವಚ್ಛತೆ ಸಂಪೂರ್ಣ ಮರೀಚಿಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಂಡಗಳ ಅಭಿವೃದ್ಧಿಗಾಗಿ ಲಕ್ಷಾಂತರ ರೂಪಾಯಿ ಅನುದಾನ ಬಿಡುಗಡೆಯಾಗಿದ್ದರೂ ಸಮರ್ಪಕ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಅನುದಾನ ಎಲ್ಲಿ ಬಳಕೆಯಾಗಿದೆ ಎಂಬುದನ್ನು ಜಿಲ್ಲಾಡಳಿತ ಪರಿಶೀಲಿಸಬೇಕು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರು ಮೂಲಭೂತ ಸೌಲಭ್ಯಗಳಿಗೂ ಪರದಾಡುವಂತಾಗಿದೆ ಎಂದು ಕಿಡಿಕಾರಿದರು.
ಸಂಬಂಧಪಟ್ಟ ಅಧಿಕಾರಿಗಳು 24 ಗಂಟೆಗಳೊಳಗೆ ತಾಂಡಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಶೀಲಿಸಿ, ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಯಾದಗಿರಿ-ಸೈದಾಪುರ ಮುಖ್ಯ ರಸ್ತೆಯನ್ನು ತಡೆದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಉಮೇಶ ಕೆ. ಮುದ್ನಾಳ್ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಮಹೇಶ ಕಿರಗಿ, ಹಣಮಂತ ಕಾರಪೇಂಟರ್, ವೆಂಕಟೇಶ ಹಾಲಗೇರಿ, ಮಲ್ಲಪ್ಪ, ಗುಂಡಪ್ಪ, ನೀಲಪ್ಪ, ರೆಡ್ಡಿ, ರಮೇಶ, ಲಚಪ್ಪ, ನಿಂಗಪ್ಪ, ನಿಖಿಲ್, ದೇವಪ್ಪ, ಸುನಿಲ್, ಉಮೇಶ್, ಮಹೇಶ್, ಚಂದಪ್ಪ, ಧರ್ಮ, ಅಂಬಾರಾಯ, ನೆಹರು, ಸೀತಪ್ಪ, ವೆಂಕಟೇಶ್, ಭೀಮ, ನಕ್ಷತ್ರ, ಸೂರ್ಯ, ರವಿ, ಗುಂಡಪ್ಪ ಚವ್ಹಾಣ, ವಿನೋದಾ, ಅನಿಲ್, ಗಣೇಶ್ ಕುಮಾರ್, ಶಂಕರ್, ರಾಮು ಸೇರಿದಂತೆ ತಾಂಡದ ಮುಖಂಡರು, ಯುವಕರು ಹಾಗೂ ಮಹಿಳೆಯರು ಭಾಗವಹಿಸಿದ್ದರು.






