Yadgiri | ಗೂರನೂರದಲ್ಲಿ ದಾರಿ ವಿವಾದ : ರಸ್ತೆ ಬಂದ್ ಮಾಡಿ ದಲಿತರು-ಗ್ರಾಮಸ್ಥರ ಪ್ರತಿಭಟನೆ

ಗುರುಮಠಕಲ್: ತಾಲೂಕಿನ ಗೂರನೂರ ಗ್ರಾಮದಲ್ಲಿ ದಲಿತರ ಜಮೀನುಗಳಿಗೆ ತೆರಳುವ ರಸ್ತೆಯನ್ನು ಮೇಲ್ವರ್ಗದ ಎರಡು ಕುಟುಂಬಗಳು ಬಂದ್ ಮಾಡಿರುವುದನ್ನು ಖಂಡಿಸಿ ದಲಿತರು ಹಾಗೂ ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಗ್ರಾಮದ ದಲಿತರು ಹಾಗೂ ಇತರೆ ಸಮುದಾಯದ ರೈತರು ಹಲವು ವರ್ಷಗಳಿಂದ ಬಳಸುತ್ತಿದ್ದ ರಸ್ತೆಯನ್ನು ಕಳೆದ ಎರಡು ವರ್ಷಗಳಿಂದ ಎರಡು ಕುಟುಂಬಗಳು ತಮ್ಮ ಖಾಸಗಿ ಜಾಗವೆಂದು ಹೇಳಿ ಸಂಚಾರಕ್ಕೆ ನಿರ್ಬಂಧ ಹೇರಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ರಸ್ತೆ ಬಂದ್ ಆಗಿರುವುದರಿಂದ ರೈತರಿಗೆ ತಮ್ಮ ಜಮೀನುಗಳಿಗೆ ತೆರಳಲು ತೀವ್ರ ತೊಂದರೆಯಾಗುತ್ತಿದೆ. ಈ ಕುರಿತು ಹಲವು ಬಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.
ಸಂಚಾರಕ್ಕೆ ತೊಂದರೆಯಾಗಿರುವ ಕಾರಣ ಶಾಲಾ ಮಕ್ಕಳು ಸಹ ಜಮೀನುಗಳ ಮೂಲಕ ಶಾಲೆಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಆಕ್ರೋಶಗೊಂಡ ದಲಿತರು ಹಾಗೂ ಗ್ರಾಮಸ್ಥರು ಗ್ರಾಮದ ಸಂಪರ್ಕ ರಸ್ತೆಗೆ ಮುಳ್ಳಿನ ಬೇಲಿ ಹಾಕಿ ಪ್ರತಿಭಟನೆ ನಡೆಸಿದರು.
ರಸ್ತೆ ತಮ್ಮ ಖಾಸಗಿ ಜಾಗದಲ್ಲಿರುವುದರಿಂದ ಸಾರ್ವಜನಿಕ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂಬುದು ಸಂಬಂಧಿತ ಕುಟುಂಬಗಳ ವಾದವಾಗಿದೆ. ಆದರೆ, ಜಾಗ ಖಾಸಗಿಯದ್ದಾಗಿದ್ದರೆ ಅದೇ ಮಾರ್ಗದಲ್ಲಿ ಸರ್ಕಾರದಿಂದ ಸಿಸಿ ರಸ್ತೆ ನಿರ್ಮಾಣಕ್ಕೆ ಹೇಗೆ ಅನುಮತಿ ನೀಡಲಾಯಿತು ಎಂದು ಗ್ರಾಮಸ್ಥರು ಪ್ರಶ್ನಿಸಿದರು.
ಜಮೀನಿಗೆ ತೆರಳಲು ಸೂಕ್ತ ವ್ಯವಸ್ಥೆ ಕಲ್ಪಿಸಿ ರಸ್ತೆ ಸಮಸ್ಯೆಯನ್ನು ಶೀಘ್ರ ಬಗೆಹರಿಸಬೇಕು. ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ರೈತರು ಹಾಗೂ ಗ್ರಾಮಸ್ಥರು ಆಗ್ರಹಿಸಿದರು.






