Yadgiri | ಆರ್‌ಟಿಐ ಕಾಯ್ದೆ ಆಡಳಿತದ ಪಾರದರ್ಶಕತೆ, ಉತ್ತರದಾಯಿತ್ವಕ್ಕೆ ಪ್ರಮುಖ: ವೆಂಕಟಸಿಂಗ್

ಯಾದಗಿರಿ: ಭಾರತದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಉತ್ತರದಾಯಿತ್ವವನ್ನು ಕಾಯ್ದುಕೊಳ್ಳುವಲ್ಲಿ ಮಾಹಿತಿ ಹಕ್ಕು ಕಾಯ್ದೆ ಅತ್ಯಂತ ಪ್ರಮುಖವಾಗಿದೆ ಎಂದು ಕರ್ನಾಟಕ ರಾಜ್ಯ ಮಾಹಿತಿ ಆಯೋಗ, ಕಲಬುರಗಿ ಪೀಠದ ರಾಜ್ಯ ಮಾಹಿತಿ ಆಯುಕ್ತ ಬಿ.ವೆಂಕಟಸಿಂಗ್ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗಾಗಿ ಆಯೋಜಿಸಿದ್ದ ಮಾಹಿತಿ ಹಕ್ಕು ಕಾಯ್ದೆ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಮಾಹಿತಿ ಹಕ್ಕು ಕಾಯ್ದೆಯು ಪ್ರಜೆಗಳಿಗೆ ಸರ್ಕಾರದ ಆಡಳಿತದ ಕುರಿತು ಪ್ರಶ್ನಿಸುವ ಹಾಗೂ ಅಗತ್ಯ ಮಾಹಿತಿಯನ್ನು ಪಡೆಯುವ ಅಧಿಕಾರ ನೀಡಿದೆ. ವಿಶ್ವದ 112ಕ್ಕೂ ಹೆಚ್ಚು ದೇಶಗಳಲ್ಲಿ ಇಂತಹ ಕಾಯ್ದೆಗಳು ಜಾರಿಯಲ್ಲಿದ್ದು, ಸುಮಾರು 300 ವರ್ಷಗಳ ಇತಿಹಾಸ ಹೊಂದಿವೆ. ಭಾರತದಲ್ಲಿ 2005ರಲ್ಲಿ ಈ ಕಾಯ್ದೆ ಜಾರಿಗೆ ಬಂದಿದ್ದು, ಅದೇ ವರ್ಷ ಕರ್ನಾಟಕವೂ ಕಾಯ್ದೆಯನ್ನು ಅನುಷ್ಠಾನಗೊಳಿಸಿದೆ ಎಂದು ತಿಳಿಸಿದರು.
ಈ ಹಿಂದೆ ಕಲ್ಯಾಣ ಕರ್ನಾಟಕ ಭಾಗದ ಆರ್‌ಟಿಐ ಅರ್ಜಿಗಳ ವಿಚಾರಣೆ ಬೆಂಗಳೂರಿನ ಪೀಠದಲ್ಲೇ ನಡೆಯುತ್ತಿತ್ತು. 2024ರಲ್ಲಿ ಕಲಬುರಗಿಯಲ್ಲಿ ಮಾಹಿತಿ ಆಯೋಗದ ಪೀಠ ಆರಂಭಿಸಲಾಯಿತು. ಕರ್ನಾಟಕ ಮಾಹಿತಿ ಆಯೋಗದಲ್ಲಿ ಬಾಕಿ ಇದ್ದ ಸುಮಾರು 45 ಸಾವಿರ ಪ್ರಕರಣಗಳ ಪೈಕಿ ಕಳೆದ ಒಂದೂವರೆ ವರ್ಷದಲ್ಲಿ ಹೆಚ್ಚಿನ ಪ್ರಕರಣಗಳನ್ನು ವಿಲೇವಾರಿ ಮಾಡುವ ಮೂಲಕ ದೇಶದಲ್ಲೇ ಪ್ರಕರಣಗಳ ವಿಲೇವಾರಿಯಲ್ಲಿ ಕರ್ನಾಟಕ ಮೊದಲ ಸ್ಥಾನಕ್ಕೇರಿದೆ ಎಂದು ಹೇಳಿದರು.
ಕಲಬುರಗಿ ಪೀಠದಲ್ಲಿ ಬಾಕಿ ಇದ್ದ 6,500ಕ್ಕೂ ಹೆಚ್ಚು ಪ್ರಕರಣಗಳ ಪೈಕಿ 115 ದಿನಗಳ ವಿಚಾರಣೆ ಅವಧಿಯಲ್ಲಿ 2,800ಕ್ಕೂ ಹೆಚ್ಚು ಹಳೆಯ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ವೆಂಕಟಸಿಂಗ್ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ತಮ್ಮ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಆರ್‌ಟಿಐ ಅರ್ಜಿಗಳ ಸ್ವೀಕಾರ, ವಿಲೇವಾರಿ ಹಾಗೂ ಬಾಕಿ ಇರುವ ಪ್ರಕರಣಗಳ ಕುರಿತು ನಿಯಮಿತವಾಗಿ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು.
ಸಾರ್ವಜನಿಕ ಮಾಹಿತಿ ಅಧಿಕಾರಿಗಳು ನಿಗದಿತ ಅವಧಿಯಲ್ಲಿ ಸೂಕ್ತ ಮಾಹಿತಿ ನೀಡದಿದ್ದರೆ ಅಥವಾ ನಿರ್ಲಕ್ಷ್ಯ ವಹಿಸಿದರೆ ಆಯೋಗಕ್ಕೆ ದಂಡ ವಿಧಿಸುವ ಅಧಿಕಾರವಿದೆ. ದಂಡನೆಗೆ ಒಳಗಾಗುವ ಅಧಿಕಾರಿಗಳ ವೇತನದಿಂದಲೇ ದಂಡದ ಮೊತ್ತವನ್ನು ಎಚ್‌ಆರ್‌ಎಂಎಸ್ ವ್ಯವಸ್ಥೆಯ ಮೂಲಕ ಕಡಿತಗೊಳಿಸುವ ಕ್ರಮ ಮುಂಬರುವ ದಿನಗಳಲ್ಲಿ ಜಾರಿಯಾಗಲಿದೆ. ಆದ್ದರಿಂದ ಅಧಿಕಾರಿಗಳು ಸಕಾಲದಲ್ಲಿ ಮಾಹಿತಿ ಒದಗಿಸುವ ಮೂಲಕ ಶಿಸ್ತು ಕ್ರಮದಿಂದ ತಪ್ಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಾರ್ವಜನಿಕರಿಗೆ ಮಾಹಿತಿ ಒದಗಿಸುವುದು ಸರ್ಕಾರಿ ನೌಕರರ ಕರ್ತವ್ಯವಾಗಿದ್ದು, ಅಧಿಕಾರಿಗಳು ತಮ್ಮ ಸೇವಾವಧಿಯಲ್ಲಿ ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.
ಜಿಲ್ಲಾಧಿಕಾರಿ ರಾಹುಲ್ ತುಕಾರಾಮ್ ಪಾಂಡ್ವೆ ಮಾತನಾಡಿ, ಆರ್‌ಟಿಐ ಕಾಯ್ದೆಯಡಿ ಅರ್ಜಿಗಳು ಹಾಗೂ ಮೇಲ್ಮನವಿಗಳ ವಿಲೇವಾರಿಯಲ್ಲಿ ಎದುರಾಗುವ ಸವಾಲುಗಳ ಕುರಿತು ಅಧಿಕಾರಿಗಳಿಗೆ ಅರಿವು ಮೂಡಿಸಿದರು. ಪ್ರತಿಯೊಬ್ಬ ಸರ್ಕಾರಿ ಅಧಿಕಾರಿಗೂ ಕಾಯ್ದೆಯ ನಿಯಮಗಳು, ಅಧಿಕಾರ ಹಾಗೂ ಕರ್ತವ್ಯಗಳ ಬಗ್ಗೆ ಸ್ಪಷ್ಟ ಅರಿವಿರಬೇಕು. ಇದರಿಂದ ಅನಗತ್ಯವಾಗಿ ಅರ್ಜಿಗಳು ಮತ್ತು ಮೇಲ್ಮನವಿಗಳು ಬಾಕಿ ಉಳಿಯುವುದನ್ನು ತಡೆಯಬಹುದು ಎಂದರು.
ಸಾರ್ವಜನಿಕರು ಆರ್‌ಟಿಐ ಅರ್ಜಿ ಸಲ್ಲಿಸಿದ ತಕ್ಷಣ ಅದನ್ನು ನಕಾರಾತ್ಮಕವಾಗಿ ನೋಡುವ ಅಧಿಕಾರಿಗಳ ಮನೋಭಾವ ಬದಲಾಗಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಮಾಹಿತಿ ಆಯೋಗದ ಬೆಂಗಳೂರು ಪೀಠದ ಆಯುಕ್ತ ಡಾ.ವಾಳ್ವೆಕರ್, ಜಿಲ್ಲಾಧಿಕಾರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಅಪರ ಜಿಲ್ಲಾಧಿಕಾರಿ ರಮೇಶ ಕೋಲಾರ್, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.






