ಯಾದಗಿರಿ | ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಶೈಕ್ಷಣಿಕವಾಗಿ ಕೊಡುಗೆ ನೀಡಿದೆ : ಅರುಣಕುಮಾರ

ಸುರಪುರ : ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಲಬುರಗಿಯ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಬಹುದೊಡ್ಡ ಶೈಕ್ಷಣಿಕ ಕೊಡುಗೆ ನೀಡಿದೆ ಎಂದು ಕ್ಯಾಡಮ್ಯಾಕ್ಸ್ ಸಲ್ಯೂಷೆನ್ಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಅರಣುಕುಮಾರ ಪಾಟೀಲ್ ಹೊಗಳಿದರು.
ನಗರದ ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯ ಸಭಾಂಗಣದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಜ್ಞಾನ ಮಂಥನ 2025-26 ಹಾಗೂ ಪದವಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾನು ಕೂಡ ಶರಣಬಸವೇಶ್ವರ ವಿದ್ಯಾ ಸಂಸ್ಥೆಯಲ್ಲಿ ಓದಿರುವ ವಿದ್ಯಾರ್ಥಿ ಎಂದು ಹೇಳಿಕೊಳ್ಳಲು ಹೆಮ್ಮೆಯಿದೆ. ಈ ಸಂಸ್ಥೆಯಲ್ಲಿ ಓದಿರುವ ಅನೇಕ ವಿದ್ಯಾರ್ಥಿಗಳು ದೇಶದ ನಾನಾ ಭಾಗಗಳಲ್ಲಿ ಹಾಗೂ ವಿದೇಶಗಳಲ್ಲೂ ಕೆಲಸ ಮಾಡುತ್ತಿದ್ದಾರೆ. ನಾನು ಹತ್ತು ಕಂಪನಿಗಳನ್ನು ನಡೆಸುತ್ತಿದ್ದು, ತಾವು ಕೂಡ ಇಂದು ಇಂಜಿನಿಯರ್ ಪದವಿ ಪಡೆದು ಹೋಗುತ್ತಿದ್ದೀರಿ, ಮುಂದೆ ನೀವು ಉನ್ನತ ಸ್ಥಾನ ಹೊಂದುವಂತಾಗಲಿ. ಆಗ ಹೆತ್ತವರನ್ನು ಅದರಂತೆ ನೀವು ಕಲಿತ ಸಂಸ್ಥೆಯನ್ನು ಮತ್ತು ಉಪನ್ಯಾಸಕರನ್ನು ಮರೆಯಬೇಡಿ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮತ್ತೋರ್ವ ಮುಖ್ಯ ಅತಿಥಿ ಆರೋಗ್ಯದ ಕುರಿತ ತರಬೇತಿದಾರ ನದಿಮುದ್ದೀನ್, ಕಾಲೇಜಿನ ಪ್ರಾಂಶುಪಾಲ ಶರಣಬಸಪ್ಪ ಸಾಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ 128 ಜನ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಅಲ್ಲದೆ ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಸುರಪುರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ಗುತ್ತೇದಾರ ಉಪಸ್ಥಿತರಿದ್ದರು. ಸಂಸ್ಥೆಯ ಜಂಟಿ ಕಾರ್ಯದರ್ಶಿ ದೊಡ್ಡಪ್ಪ ಎಸ್.ನಿಷ್ಠಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪರೀಕ್ಷಾ ವಿಭಾಗದ ಮುಖ್ಯಸ್ಥ ಡಾ.ಅಶೋಕ ಪಾಟೀಲ್, ಅಕಾ ಆಡೆಮಿಕ್ ಡೀನ್ ಪ್ರೊ.ಶರಣಗೌಡ ಪಾಟೀಲ್ ಉಪಸ್ಥಿತರಿದ್ದರು. ಮೇಘನಾ ಸ್ವಾಗತಿಸಿದರು, ವೈಷ್ಣವಿ ಪಾಟೀಲ್, ಗಿರಿಜಾ,ಭೂಮಿಕ ನಿರೂಪಿಸಿದರು, ಪ್ರೊ.ಗಂಗಾಧರ ಹೂಗಾರ ವಂದಿಸಿದರು.
ವೀರಪ್ಪ ನಿಷ್ಠಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದಿ ಇಂದು ಇಂಜಿನಿಯರ್ ಪದವಿ ಪಡೆದ ಕೆಲವು ವಿದ್ಯಾರ್ಥಿಗಳಿಗೆ ನಮ್ಮ ಕಂಪನಿಯಲ್ಲಿಯೇ ಕೆಲಸ ನೀಡುವೆ.
- ಅರುಣಕುಮಾರ ಪಾಟೀಲ್ ಕ್ಯಾಡಮ್ಯಾಕ್ಸ್ ಸಲ್ಯೂಷನ್ಸ್ ಕಂಪನಿ ಚೇರಮನ್ ಬೆಂಗಳೂರು
ನಮ್ಮ ವೀರಪ್ಪ ನಿಷ್ಠಿ ಇಂಜಿನಿಯರಿಂಗ್ ಕಾಲೇಜು 15 ವರ್ಷದಿಂದ ಉತ್ತಮ ಶಿಕ್ಷಣ ನೀಡುತ್ತಿದೆ. ಸರಕಾರ ನಿಗದಿಪಡಿಸಿದ ಶುಲ್ಕ ಮಾತ್ರ ಪಡೆಯುತ್ತೇವೆ, ಯಾವುದೇ ಡೊನೇಷನ್ ಪಡೆಯದೆ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಇಂಜಿನಿಯರಿಂಗ್ ಶಿಕ್ಷಣ ನೀಡಲಾಗುತ್ತದೆ.
- ಶರಣಬಸಪ್ಪ ಸಾಲಿ ಕಾಲೇಜಿನ ಪ್ರಾಂಶುಪಾಲ







