Yadgiri | ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಿದ್ದರಾಜು ಸ್ವಾಮೀಜಿ ಆಯ್ಕೆ: ಮಾದಿಗ ದಂಡೋರ ಸಮಿತಿ ಹರ್ಷ

ಯಾದಗಿರಿ: 27ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಡಾ.ಸಿದ್ದರಾಜು ಸ್ವಾಮೀಜಿ ಅವರನ್ನು ಆಯ್ಕೆ ಮಾಡಿರುವುದಕ್ಕೆ ಮಾದಿಗ ದಂಡೋರ ಸಮಿತಿ ಹರ್ಷ ವ್ಯಕ್ತಪಡಿಸಿದೆ.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾದಿಗ ದಂಡೋರ ಸಮಿತಿಯ ರಾಜ್ಯ ಉಪಾಧ್ಯಕ್ಷ ಗಣೇಶ್ ದುಪ್ಪಲ್ಲಿ, ದಲಿತ ಸಮಾಜದ ಸ್ವಾಮೀಜಿಯೊಬ್ಬರನ್ನು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿಯಾಗಿದೆ ಎಂದರು.
ಎಲೆಮರೆಯ ಕಾಯಿಯಂತೆ ಸಮಾಜಮುಖಿ ಸೇವೆ ಸಲ್ಲಿಸುತ್ತಿರುವ ಶ್ರೀಗಳನ್ನು ಗುರುತಿಸಿ ಗೌರವದ ಸ್ಥಾನ ನೀಡಿರುವುದು ಸಂತಸ ತಂದಿದೆ. ಈ ಆಯ್ಕೆ ಮಾಡಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಸರ್ವ ಸದಸ್ಯರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಡಾ. ಸಿದ್ದರಾಜು ಸ್ವಾಮೀಜಿಯವರು ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ. ಬಡ ಕುಟುಂಬಗಳ 9 ಸಾವಿರಕ್ಕೂ ಹೆಚ್ಚು ಜೋಡಿಗಳಿಗೆ ಉಚಿತ ಸಾಮೂಹಿಕ ವಿವಾಹ ನೆರವೇರಿಸುವ ಮೂಲಕ ಬಡವರ ಬದುಕಿಗೆ ಆಸರೆಯಾಗಿದ್ದಾರೆ. ಅಲ್ಲದೆ, 375ಕ್ಕೂ ಹೆಚ್ಚು ನಾಟಕಗಳಲ್ಲಿ ಪೌರಾಣಿಕ ಪಾತ್ರಗಳಿಗೆ ಜೀವ ತುಂಬುವ ಮೂಲಕ ಕಲಾ ಕ್ಷೇತ್ರದಲ್ಲಿಯೂ ವಿಶಿಷ್ಟ ಸಾಧನೆ ಮಾಡಿದ್ದಾರೆ. ಇಂತಹ ಬಹುಮುಖ ಪ್ರತಿಭೆಯುಳ್ಳ ಸ್ವಾಮೀಜಿಯವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಶ್ಲಾಘನೀಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ. ಭೀಮರಾಯ ಲಿಂಗೇರಿ, ಪರಮರಡ್ಡಿ ಕಂದಕೂರ, ಅನಿಲ್ ದಾಸನಕೇರಿ, ಮೈಲಾರಪ್ಪ ಜಾಂಗಿರದಾರ್ ಹಾಗೂ ಚಂದ್ರಶೇಖರ ಮುಂಡರಗಿ ಉಪಸ್ಥಿತರಿದ್ದರು.






