Yadgiri | ನಿವೇಶನಕ್ಕಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಸ್ಲಂ ನಿವಾಸಿಗಳ ನಿರಂತರ ಧರಣಿ

ಯಾದಗಿರಿ: ನಗರದ ನಿವೇಶನ ರಹಿತ ಬಡವರಿಗೆ ನಿವೇಶನ ಕಲ್ಪಿಸುವಂತೆ ಆಗ್ರಹಿಸಿ ಸ್ಲಂ ಜನಾಂದೋಲನ ಕರ್ನಾಟಕ ಹಾಗೂ ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘಟನೆ ನೇತೃತ್ವದಲ್ಲಿ ನೂರಾರು ನಿವಾಸಿಗಳು ಎರಡು ದಿನಗಳಿಂದ ಜಿಲ್ಲಾಧಿಕಾರಿ ಕಚೇರಿ ಎದುರು ನಿರಂತರ ಧರಣಿ ನಡೆಸುತ್ತಿದ್ದಾರೆ.
ಸ್ಲಂ ಜನಾಂದೋಲನ ಕರ್ನಾಟಕದ ಜಿಲ್ಲಾಧ್ಯಕ್ಷ ಹಣಮಂತ ಶಹಾಪೂರಕರ್, ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘಟನೆ ಜಿಲ್ಲಾ ಸಂಚಾಲಕಿ ಸಂಗೀತಾ ಹಪ್ಪಳ ಹಾಗೂ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರೇಣುಕಾ ಸರಡಗಿ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿಯಲ್ಲಿ 200ಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ನಿವೇಶನ ಕಲ್ಪಿಸುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸುತ್ತಿದ್ದಾರೆ.
ನಗರದ ನಿವೇಶನ ರಹಿತರ ಸಮಸ್ಯೆಯನ್ನು ಹಲವು ವರ್ಷಗಳಿಂದ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದರೂ ಇದುವರೆಗೆ ಪರಿಹಾರ ದೊರೆತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
2020ರ ಜ.29ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ ಸಂದರ್ಭದಲ್ಲಿ ಮುಂಡರಗಿಯಲ್ಲಿರುವ ಸರ್ಕಾರಿ ಜಾಗವನ್ನು ಗುರುತಿಸಿ ಅರ್ಹ ಫಲಾನುಭವಿಗಳಿಗೆ ನಿವೇಶನ ನೀಡುವುದಾಗಿ ಜಿಲ್ಲಾಡಳಿತ ಭರವಸೆ ನೀಡಿತ್ತು. ಆದರೆ ಕೋವಿಡ್ ಕಾರಣ ನೀಡಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿತ್ತು. ಬಳಿಕವೂ ಈ ಪ್ರಕ್ರಿಯೆಗೆ ಮರುಚಾಲನೆ ನೀಡದೆ ಬಡವರ ಬೇಡಿಕೆಯನ್ನು ನಿರ್ಲಕ್ಷಿಸಲಾಗಿದೆ ಎಂದು ದೂರಿದರು.
2025ರ ಡಿ.5 ಹಾಗೂ 2026ರ ಜೂ.10ರಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹಲವು ವರ್ಷಗಳಿಂದ ಮನವಿ, ಪ್ರತಿಭಟನೆ ನಡೆಸಿದರೂ ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ನಿರಂತರ ಧರಣಿ ಆರಂಭಿಸಲಾಗಿದೆ. ನಗರದ ಅರ್ಹ ನಿವೇಶನ ರಹಿತರಿಗೆ ನಿವೇಶನ ಮಂಜೂರು ಮಾಡುವವರೆಗೆ ಧರಣಿ ಮುಂದುವರಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಮಂಗಳವಾರ ಸಂಜೆಯವರೆಗೂ ಜಿಲ್ಲಾಡಳಿತದ ಪರವಾಗಿ ಯಾರೊಬ್ಬರೂ ಧರಣಿ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿಲ್ಲ ಹಾಗೂ ಬೇಡಿಕೆ ಈಡೇರಿಸುವ ಕುರಿತು ಭರವಸೆ ನೀಡಿಲ್ಲ ಎಂದು ರೇಣುಕಾ ಸರಡಗಿ ತಿಳಿಸಿದರು.
ಧರಣಿಯಲ್ಲಿ ಈರಮ್ಮ ಕೋಳೂರ, ಯಂಕಮ್ಮ ಮಾಳಿಕೇರಿ, ಶಂಕ್ರಮ್ಮ ಕೊಟಿಮನಿ, ಸಂಗೀತಾ ಹರಿಕೇರಿ, ನಿರ್ಮಲಾ ಸುಂಗಲಕರ್, ಬಾಬುಮಿಯಾ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಬಡವರೊಂದಿಗೆ ಜಿಲ್ಲಾಡಳಿತ ಚೆಲ್ಲಾಟ: ಹೋರಾಟಗಾರರ ಆಕ್ರೋಶ
2021ರ ಜ.18ರಂದು ನಿವೇಶನಕ್ಕಾಗಿ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲಾಗಿತ್ತು. ಖಾಸಗಿ ಜಮೀನು ಖರೀದಿಸಿ ನಿವೇಶನ ರಹಿತರಿಗೆ ಹಂಚಿಕೆ ಮಾಡುವ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಬಳಿಕ 2023ರ ಮಾ.2ರಿಂದ 15 ದಿನಗಳ ಕಾಲ ಅನಿರ್ದಿಷ್ಟ ಸತ್ಯಾಗ್ರಹ ನಡೆಸಿದ ಸಂದರ್ಭದಲ್ಲಿ ಚುನಾವಣೆ ಬಳಿಕ ನಿವೇಶನ ರಹಿತರ ಸಮಸ್ಯೆ ಬಗೆಹರಿಸಿ ಅರ್ಹ ಫಲಾನುಭವಿಗಳಿಗೆ ನಿವೇಶನ ನೀಡುವುದಾಗಿ ಜಿಲ್ಲಾಧಿಕಾರಿಗಳು ಲಿಖಿತ ಭರವಸೆ ನೀಡಿದ್ದರು. ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಬಡವರೊಂದಿಗೆ ಜಿಲ್ಲಾಡಳಿತ ನಡೆಸುತ್ತಿರುವ ಚೆಲ್ಲಾಟವಾಗಿದೆ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.






