Yadgiri | ವಿಕಲಚೇತನರ ಸ್ವಾವಲಂಬಿ ಬದುಕಿಗಾಗಿ ಅ.28ರಂದು ವಿಶೇಷ ಕಾರ್ಯಕ್ರಮ : ಪಣೀಂದ್ರ ಸಿಂಗ್

ಯಾದಗಿರಿ: ವಿಕಲಚೇತನರು ಸ್ವಂತ ಉದ್ಯಮಗಳನ್ನು ಆರಂಭಿಸಿ ಆರ್ಥಿಕವಾಗಿ ಸಬಲರಾಗುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಉತ್ತೇಜನ ನೀಡುವ ಉದ್ದೇಶದಿಂದ ಸೆಲ್ಲೋ ಫೌಂಡೇಶನ್ ವತಿಯಿಂದ ಅ. 28ರಂದು ನಗರದ ಶ್ರೀ ಬಾಲಾಜಿ ಕಲ್ಯಾಣ ಮಂಟಪದಲ್ಲಿ ‘ಸ್ವಾವಲಂಬಿ ಬದುಕಿನತ್ತ–ವಿಕಲಚೇತನರ ಜೀವನೋಪಾಯ ಮತ್ತು ಉದ್ಯಮಶೀಲತೆಯ ಮಾರ್ಗಗಳು’ ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಫೌಂಡೇಶನ್‌ನ ಹಿರಿಯ ಯೋಜನಾ ವ್ಯವಸ್ಥಾಪಕ ಪಣೀಂದ್ರ ಸಿಂಗ್ ತಿಳಿಸಿದರು.
ಸೋಮವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಕಲಚೇತನರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿಯ ಸಹಕಾರದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 10 ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಪಾಂಡೈ ರಾಹುಲ್ ಉದ್ಘಾಟಿಸಲಿದ್ದು, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶರಣಗೌಡ ಪಾಟೀಲ್ ಹಾಗೂ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ವಿಶೇಷ ಭಾಷಣ ಮಾಡಲಿದ್ದಾರೆ. ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಪ್ರಾದೇಶಿಕ ವ್ಯವಸ್ಥಾಪಕ ಜಿ.ಎಸ್. ಕೊಡ್ಲಿ ಮತ್ತು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ರಾಜ್ಯ ಸಂಯೋಜಕ ಬಿ.ಸಿ. ನರಸಿಂಹಮೂರ್ತಿ ಅವರು ಜೀವನೋಪಾಯದ ಅವಕಾಶಗಳ ಕುರಿತು ಮಾತನಾಡಲಿದ್ದಾರೆ ಎಂದರು.
ವಿಕಲಚೇತನರಲ್ಲಿ ಸಾಕಷ್ಟು ಕೌಶಲ್ಯ ಮತ್ತು ಉದ್ಯಮಶೀಲತೆಯ ಆಸಕ್ತಿ ಇದ್ದರೂ, ಯಂತ್ರೋಪಕರಣಗಳು, ಹಣಕಾಸಿನ ನೆರವು, ಮಾರುಕಟ್ಟೆ ಸಂಪರ್ಕ ಹಾಗೂ ಸರ್ಕಾರಿ ಯೋಜನೆಗಳ ಕುರಿತು ಮಾಹಿತಿ ಕೊರತೆಯಿಂದ ಅನೇಕರು ಸ್ವಂತ ಉದ್ಯಮ ಆರಂಭಿಸಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಯನ್ನು ನಿವಾರಿಸಿ, ಅವರಿಗೆ ಅಗತ್ಯ ಮಾರ್ಗದರ್ಶನ ನೀಡುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹೊಲಿಗೆ ಘಟಕ, ಆಹಾರ ಸಂಸ್ಕರಣೆ, ರೊಟ್ಟಿ ತಯಾರಿಕೆ, ಸಣ್ಣ ವ್ಯಾಪಾರ ಸೇರಿದಂತೆ ವಿವಿಧ ಸ್ವಯಂ ಉದ್ಯೋಗಗಳ ಕುರಿತು ಮಾಹಿತಿ ನೀಡಲಾಗುವುದು. ಅಲ್ಲದೆ, ಸೌರಶಕ್ತಿ ಆಧಾರಿತ ಉಪಕರಣಗಳು ಹಾಗೂ ಸಣ್ಣ ಉದ್ಯಮಗಳಿಗೆ ಪೂರಕವಾದ ತಂತ್ರಜ್ಞಾನ ಪರಿಹಾರಗಳನ್ನು ಪರಿಚಯಿಸಲಾಗುವುದು. ಮುದ್ರಾ ಸಾಲ, ಪಿಎಂಎಫ್‌ಎಂಇ ಮತ್ತು ಪಿಎಂಇಜಿಪಿ ಸೇರಿದಂತೆ ವಿವಿಧ ಯೋಜನೆಗಳಡಿ ಲಭ್ಯವಿರುವ ಸಾಲ ಸೌಲಭ್ಯ ಹಾಗೂ ಆರ್ಥಿಕ ನೆರವು ಪಡೆಯುವ ವಿಧಾನಗಳ ಕುರಿತು ಅರಿವು ಮೂಡಿಸಲಾಗುವುದು ಎಂದರು.
ವಿಕಲಚೇತನರು ಆರ್ಥಿಕವಾಗಿ ಸ್ವತಂತ್ರರಾಗಿ ಗೌರವಯುತ ಜೀವನ ನಡೆಸಲು ಹಾಗೂ ತಮ್ಮದೇ ಆದ ಉದ್ಯಮಗಳನ್ನು ಸ್ಥಾಪಿಸಿಕೊಂಡು ಸ್ವಾವಲಂಬಿಗಳಾಗಲು ಈ ಕಾರ್ಯಕ್ರಮ ನೆರವಾಗಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನವೀನ್ ಬೋರೆಡ್ಡಿ ಉಪಸ್ಥಿತರಿದ್ದರು.






