ಯಾದಗಿರಿ | ಕಾಲ್ತುಳಿತ ಪ್ರಕರಣ; ಪೊಲೀಸರ ಅಮಾನತು ಸರಿಯಲ್ಲ : ಚಂದ್ರಶೇಖರಗೌಡ ಮಾಗನೂರ

ಯಾದಗಿರಿ: ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರವು ತಮ್ಮ ರಕ್ಷಣೆಗಾಗಿ ಪೊಲೀಸ್ ಇಲಾಖೆಯನ್ನು ಹೊಣೆಗಾರಿಕೆಯನ್ನಾಗಿ ಮಾಡಿರುವುದು ಖಂಡನೀಯವೆಂದು ಜಿಲ್ಲಾ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರುಗಳು ತಮ್ಮ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲೆಂದೇ ಆರ್ ಸಿಬಿ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಪ್ರತಿಷ್ಠೆಯಿಂದಲೇ ಚಿನ್ನಸ್ವಾಮಿಯಲ್ಲಿ ಕಾಲ್ತುಳಿತ ಘಟನೆ ನಡೆದಿದ್ದು, ಇದನ್ನು ಮುಚ್ಚಿ ಹಾಕಿಕೊಳ್ಳಲು ಸಮಾಜದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡಲು ಸದಾ ಶ್ರಮಿಸುತ್ತಿರುವ ಪೊಲೀಸರ ವಿರುದ್ಧ ಸರ್ಕಾರ ಆತುರದ ತೀರ್ಮಾನ ಕೈಗೊಳ್ಳುವ ಮೂಲಕ ತಪ್ಪು ನಿರ್ಧಾರ ಮಾಡಿದೆ ಎಂದಿದ್ದಾರೆ.
ಕಾಲ್ತುಳಿತಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕೇ ಹೊರತು ಪ್ರಾಮಾಣಿಕ ಪೊಲೀಸ್ ಆಯುಕ್ತರ ವಿರುದ್ಧ ಕ್ರಮ ಕೈಗೊಳ್ಳುವುದು ಸಮಂಜಸವಲ್ಲ, ಕೂಡಲೇ ಸರ್ಕಾರ ಪೊಲೀಸ್ ಅಧಿಕಾರಿಗಳ ಅಮಾನತು ಆದೇಶ ರದ್ದು ಪಡಿಸಬೇಕು. ಈ ಮೂಲಕ ಪೊಲೀಸ್ ಇಲಾಖೆಗೆ ನೈತಿಕ ಸ್ಥೈರ್ಯ ತುಂಬಬೇಕು ಎಂದಿದ್ದಾರೆ.





