Yadgiri | ಬೊಮ್ಮನಹಳ್ಳಿ ಕ್ರಾಸ್‌ನಲ್ಲಿ ಬಸ್ ನಿಲುಗಡೆಗೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ರಸ್ತೆ ತಡೆ ಪ್ರತಿಭಟನೆ

ಯಾದಗಿರಿ : ಬೊಮ್ಮನಹಳ್ಳಿ ಕ್ರಾಸ್‌ನಲ್ಲಿ ಶಾಲಾ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರಿ ಬಸ್‌ಗಳನ್ನು ನಿಲ್ಲಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಹಾಗೂ ಸಮತಾ ಸೈನಿಕ ದಳದ ಮುಖಂಡರು ಸೋಮವಾರ ಹತ್ತಿಗೂಡೂರು–ಯಾದಗಿರಿ ಮುಖ್ಯ ರಸ್ತೆಯನ್ನು ತಡೆದು ಪ್ರತಿಭಟನೆ ನಡೆಸಿದರು.
ಬೊಮ್ಮನಹಳ್ಳಿ ಗ್ರಾಮದ ವಿದ್ಯಾರ್ಥಿನಿಯರು ಪ್ರತಿದಿನ ಹತ್ತಿಗೂಡೂರು ಸರ್ಕಾರಿ ಪ್ರೌಢಶಾಲೆಗೆ ತೆರಳುತ್ತಿದ್ದು, ಕ್ರಾಸ್‌ನಲ್ಲಿ ಬಸ್‌ಗಳು ನಿಲ್ಲಿಸದ ಕಾರಣ ಸಮಯಕ್ಕೆ ಶಾಲೆ ತಲುಪಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸಾರಿಗೆ ಇಲಾಖೆಯ ಗಮನಕ್ಕೆ ಹಲವು ಬಾರಿ ಸಮಸ್ಯೆ ತಂದಿದ್ದರೂ, ಕೆಲ ದಿನ ಮಾತ್ರ ಬಸ್ ನಿಲ್ಲಿಸಿ ಬಳಿಕ ಮತ್ತೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಬಸ್ ಸೌಲಭ್ಯ ಇಲ್ಲದ ಕಾರಣ ವಿದ್ಯಾರ್ಥಿಗಳು ರಸ್ತೆಯಲ್ಲಿ ಗಂಟೆಗಟ್ಟಲೆ ಬಸ್‌ಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ರಸ್ತೆ ತಡೆ, ಸಂಚಾರ ಅಸ್ತವ್ಯಸ್ತ :
ಸೋಮವಾರ ಬೊಮ್ಮನಹಳ್ಳಿ ಕ್ರಾಸ್ ಸಮೀಪ ವಿದ್ಯಾರ್ಥಿಗಳು ಹಾಗೂ ಸಮತಾ ಸೈನಿಕ ದಳದ ಕಾರ್ಯಕರ್ತರು ರಾಜ್ಯ ಹೆದ್ದಾರಿಯಲ್ಲಿ ಜಾಲಿ ಮುಳ್ಳು ಮತ್ತು ಕಲ್ಲುಗಳನ್ನು ಹಾಕಿ ರಸ್ತೆ ತಡೆ ನಡೆಸಿದರು. ಇದರಿಂದ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.
ಸಮತಾ ಸೈನಿಕ ದಳದ ಯಾದಗಿರಿ ಜಿಲ್ಲಾ ಘಟಕದ ಅಧ್ಯಕ್ಷ ಹತ್ತಿಗೂಡೂರು ಶರಣರೆಡ್ಡಿ ಮಾತನಾಡಿ, ಬೊಮ್ಮನಹಳ್ಳಿ ಕ್ರಾಸ್‌ನಲ್ಲಿ ಪ್ರತಿದಿನ ಬಸ್ ನಿಲುಗಡೆ ವ್ಯವಸ್ಥೆ ಕಲ್ಪಿಸಬೇಕು. ಜಿಲ್ಲಾಡಳಿತ ಹಾಗೂ ಸಾರಿಗೆ ಇಲಾಖೆ ತಕ್ಷಣ ಕ್ರಮ ಕೈಗೊಂಡು ವಿದ್ಯಾರ್ಥಿಗಳ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿದರು.
ಸಮಸ್ಯೆ ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಮತ್ತೊಮ್ಮೆ ರಸ್ತೆ ತಡೆ ನಡೆಸಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.






