ಯಾದಗಿರಿ | ಆತ್ಮಹತ್ಯೆ ಪ್ರಕರಣ: ಮೃತರ ಹೆಸರಲ್ಲಿ ಐದು ಲಕ್ಷ ರೂ. ಪರಿಹಾರ ಪಡೆದು ವಂಚನೆ: ರವಿ ಮುದ್ನಾಳ್ ಆರೋಪ

ಯಾದಗಿರಿ: ಸುರಪುರ ತಾಲೂಕು ದಂಡ ಸೋಲಾಪುರ ತಾಂಡಾದ ಮೋನಾಬಾಯಿ ಪುನಿಮ್ ಚಂದ್ಎಂಬ ಮಹಿಳೆಯ ಸಾವಿಗೆ ಕಾರಣರಾದ ಮತ್ತು ಈ ಸಾವನ್ನು ಆತ್ಮಹತ್ಯೆ ಎಂದು ಬಿಂಬಿಸಿ ಸರ್ಕಾರಕ್ಕೆ ವಂಚಿಸಿ 5 ಲಕ್ಷ ರೂ. ಪರಿಹಾರ ಪಡೆದ ಆಕೆಯ ಅಣ್ಣಂದಿರು ಮತ್ತು ಅತ್ತಿಗೆಯರ ಮೇಲೆ ಪ್ರಕರಣ ದಾಖಲಿಸಿ ಕೂಡಲೇ ಬಂಧಿಸಬೇಕೆಂದು ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ರವಿ ಕೆ. ಮುದ್ನಾಳ್ ಆಗ್ರಹಿಸಿದ್ದಾರೆ.
ಮಂಗಳವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಘಟನೆ ನಡೆದಿದ್ದು, ಕಳೆದ 2023 ಅಕ್ಟೊಬರ್ 7ರಂದು. ಮೋನಾಬಾಯಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ನನ್ನ ಸಾವಿಗೆ ಅಣ್ಣ,ಅತ್ತಿಗೆಯರೇ ಕಾರಣ ಎಂದು ಹೇಳಿರುವ ವಿಡಿಯೋ ಈಗ ಸಿಕ್ಕ ಹಿನ್ನಲೆಯಲ್ಲಿ ಮತ್ತು ಈಕೆಯ ಹೆಸರಲ್ಲಿ ಪರಿಹಾರ ಪಡೆದು ಸರ್ಕಾರಕ್ಕೆ ವಂಚನೆ ಮಾಡಿದ್ದರಿಂದ ಇದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಇದು ಆಕೆಯ ಸಹಜ ಸಾವಲ್ಲ, ಹಿಂಸೆ ನೀಡಿ ಪ್ರಚೋದನೆಯಿಂದ ನಡೆದ ಸಾವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಟೋಪಣ್ಣಾ ರಾಠೋಡ್, ವಿಜಯಕುಮಾರ ಇದ್ದರು.





