Yadgiri | ಶಿಕ್ಷಕರ ಸಮಸ್ಯೆಗಳ ಅರಿವಿರುವ ಶಶೀಲ್ ನಮೋಶಿಗೆ ಬೆಂಬಲ ನೀಡಿ : ಸುಭಾಶ್ಚಂದ್ರ ಕಟಕಟಿ

ಯಾದಗಿರಿ: ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ, ಎನ್‌ಡಿಎ ಅಭ್ಯರ್ಥಿ ಶಶೀಲ್ ನಮೋಶಿ ಅವರ ಪರವಾಗಿ ಜಿಲ್ಲಾ ಜೆಡಿಎಸ್ ವತಿಯಿಂದ ಮಂಗಳವಾರ ಗುರುಮಠಕಲ್ ಕ್ಷೇತ್ರದ ವಿವಿಧೆಡೆ ಪ್ರಚಾರ ನಡೆಸಲಾಯಿತು.
ಇಲ್ಲಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ಪ್ರಚಾರ ನಡೆಸಿ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ, ನಮ್ಮ ಅಭ್ಯರ್ಥಿ ಶಶೀಲ್ ನಮೋಶಿ ಅವರು ಶಿಕ್ಷಕರ ಧ್ವನಿಯಾಗಿ ಸುದೀರ್ಘ ಅನುಭವ ಹೊಂದಿದ್ದಾರೆ. ಅವರು ಕೇವಲ ರಾಜಕಾರಣಿಯಲ್ಲ. ಈಶಾನ್ಯ ಶಿಕ್ಷಕರ ಕ್ಷೇತ್ರವನ್ನು ಹಲವು ಅವಧಿಗಳ ಕಾಲ ಪ್ರತಿನಿಧಿಸಿ, ಶಿಕ್ಷಕರ ಸಮಸ್ಯೆಗಳನ್ನು ವಿಧಾನ ಪರಿಷತ್ತಿನಲ್ಲಿ ಸಮರ್ಥವಾಗಿ ಪ್ರಸ್ತಾಪಿಸಿದ ಅಪಾರ ಅನುಭವ ಹೊಂದಿರುವ ನಾಯಕರಾಗಿದ್ದಾರೆ ಎಂದರು.
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ (ಎಚ್‌ಕೆಇ) ಅಧ್ಯಕ್ಷರಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣದ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಹಾಗೂ ಗುಣಮಟ್ಟದ ಶಿಕ್ಷಣ ಒದಗಿಸಲು ಅವರು ನಿರಂತರವಾಗಿ ಶ್ರಮಿಸಿದ್ದಾರೆ. ಶಿಕ್ಷಕರ ವೇತನ ತಾರತಮ್ಯ, ಅನುದಾನರಹಿತ ಶಾಲೆಗಳ ಸಮಸ್ಯೆಗಳು, ನಿವೃತ್ತಿ ವೇತನದ ಸೌಲಭ್ಯಗಳು ಹಾಗೂ ಉಪನ್ಯಾಸಕರ ವೃತ್ತಿಜೀವನದ ಸವಾಲುಗಳ ಕುರಿತು ಅವರಿಗೆ ಸಂಪೂರ್ಣ ಅರಿವಿದೆ. ಶಿಕ್ಷಕ ಸಮುದಾಯದ ಪರವಾಗಿ ಅವರು ಸದಾ ಮುಂಚೂಣಿಯಲ್ಲಿ ನಿಂತು ಹೋರಾಡಿದ್ದಾರೆ ಎಂದು ವಿವರಿಸಿದರು.
ರಾಜ್ಯ ಮತ್ತು ಕೇಂದ್ರದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮಿತ್ರಪಕ್ಷಗಳಾಗಿವೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಎನ್‌ಡಿಎ ಅಭ್ಯರ್ಥಿ ಶಶೀಲ್ ನಮೋಶಿ ಅವರ ಪರ ಉತ್ತಮ ಬೆಂಬಲ ವ್ಯಕ್ತವಾಗುತ್ತಿದ್ದು, ಈ ಚುನಾವಣೆಯಲ್ಲಿ ಅವರ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದ ಜಿಲ್ಲಾ ವಕ್ತಾರ ಮಲ್ಲನಗೌಡ ಹಳಿಮನಿ ಕೌಳೂರು ಮಾತನಾಡಿ, ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದೊಂದಿಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಎಚ್.ಡಿ. ಕುಮಾರಸ್ವಾಮಿ ಹಾಗೂ ಬಿ.ವೈ. ವಿಜಯೇಂದ್ರ ಅವರ ನೇತೃತ್ವದ ಬಿಜೆಪಿ-ಜೆಡಿಎಸ್ ಎನ್‌ಡಿಎ ಮೈತ್ರಿಕೂಟದ ಸಂಪೂರ್ಣ ಬೆಂಬಲ ಶಶೀಲ್ ನಮೋಶಿ ಅವರಿಗೆ ಇದೆ. ಇದು ಶಿಕ್ಷಣ ಕ್ಷೇತ್ರದ ಸರ್ವತೋಮುಖ ಬೆಳವಣಿಗೆಗೆ ಶಕ್ತಿ ತುಂಬಲಿದೆ. ಹೀಗಾಗಿ ಮತದಾರರು ತಮ್ಮ ಅಮೂಲ್ಯ ಮತವನ್ನು ನಮ್ಮ ಅಭ್ಯರ್ಥಿಗೆ ನೀಡಿ, ಅವರನ್ನು ವಿಧಾನ ಪರಿಷತ್ತಿಗೆ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
ಪಕ್ಷದ ಪ್ರಮುಖರಾದ ಶರಣು ಅವಂಟಿ, ಮಲ್ಲಿಕಾರ್ಜುನ ಅರುಣಿ, ಡಿ. ತಾಯಪ್ಪ ಬದ್ದೇಪಲ್ಲಿ, ಈಶ್ವರ ನಾಯಕ, ಜಯೇಂದ್ರ ಚವಾಣ್, ಯಲ್ಲಪ್ಪ ಬೂತ, ಶಿವಕುಮಾರ್ ಜಾಡರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಮೈತ್ರಿಕೂಟದ ಗೆಲುವು ಶತಸಿದ್ಧ:
ಪ್ರಧಾನಿ ನರೇಂದ್ರ ಮೋದಿ, ನಮ್ಮ ನಾಯಕ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ಶಾಸಕ ಶರಣಗೌಡ ಕಂದಕೂರು ಅವರು ಅಭಿವೃದ್ಧಿಪರ ಚಿಂತನೆ ಹೊಂದಿದ್ದಾರೆ. ರಾಜ್ಯದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು, ಮುಂಬರುವ ಎಲ್ಲ ಚುನಾವಣೆಗಳಲ್ಲೂ ಎನ್‌ಡಿಎ ಜಯಭೇರಿ ಬಾರಿಸುವುದು ಶತಸಿದ್ಧ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ ಹೇಳಿದರು.






