ಯಾದಗಿರಿ | ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಮುಂಜಾಗೃತ ಕ್ರಮ ವಹಿಸಿ : ಸಚಿವ ಶರಣಬಸಪ್ಪ ದರ್ಶನಾಪುರ

ಯಾದಗಿರಿ : ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿರುವ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸಲು ಮುಂಜಾಗ್ರತೆ ಕ್ರಮಗಳ ವಹಿಸುವ ಮೂಲಕ ಅಧಿಕಾರಿಗಳು ಸಾರ್ವಜನಿಕರ ಕಷ್ಟಗಳಿಗೆ ಸ್ಪಂದಿಸಬೇಕು ಎಂದು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪ ದರ್ಶನಾಪುರ ಅವರು ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಇಂದು ಜಿಲ್ಲೆಯ ಕುಡಿಯುವ ನೀರಿನ ಸ್ಥಿತಿಗತಿಗಳ ಬಗ್ಗೆ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕುಡಿಯುವ ನೀರಿನ ಸಮಸ್ಯೆ ಮತ್ತು ಪರಿಹಾರವಾಗಿ ಬಾಡಿಗೆ ಕೊಳವೆಬಾವಿಗಳ ಮೂಲಕ ನೀರು ಪೂರೈಸುತ್ತಿರುವ ಗ್ರಾಮಗಳಿಗೆ ಸ್ವಚ್ಚ, ಶುದ್ಧ ನೀರು ಒದಗಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಯಾದಗಿರಿ ಜಿಲ್ಲೆಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಅಮೃತ 2.0 ಯೋಜನೆಯಡಿ ಒಟ್ಟು 7 ಪಟ್ಟಣಗಳು ಆಯ್ಕೆಯಾಗಿದ್ದು, ಒಟ್ಟು 340.92 ಕೋ. ರೂ.ಗಳ ಹಂಚಿಕೆಯಾಗಿರುತ್ತದೆ. ಕೇಂದ್ರ ಸರ್ಕಾರದ ಪಾಲು ಶೇ.50 ರಷ್ಟು, ರಾಜ್ಯ ಸರ್ಕಾರದ ಪಾಲು ಶೇ.40 ರಷ್ಟು, ಸ್ಥಳೀಯ ಸಂಸ್ಥೆಯ ಪಾಲು ಶೇ.10 ರಷ್ಟು ಇರುತ್ತದೆ ಎಂದು ತಿಳಿಸಿದರು.
ಅಮೃತ 2.0 ಯೋಜನೆಯಡಿಯಲ್ಲಿ ನೀರು ಸರಬರಾಜು ಕಾಮಗಾರಿಗಳನ್ನು ಒಟ್ಟು 5 ಹಂತಗಳಲ್ಲಿ ಕೈಗೊಳ್ಳಲಾಗಿದೆ, ಈ ಯೋಜನೆಯಡಿ 7 ಪಟ್ಟಣಗಳಾದ ಹುಣಸಗಿ, ಕೆಂಭಾವಿ, ಕಕ್ಕೇರಾ, ಶಹಾಪೂರ, ಭೀಮರಾಯನಗುಡಿ, ಯಾದಗಿರಿ, ಗುರುಮಿಠಕಲ್ ಕಾಮಗಾರಿಗಳು ಪ್ರಗತಿಯಲ್ಲಿವೆ. ಈ ಕಾಮಗಾರಿಗಳನ್ನು 2 ವರ್ಷಗಳಲ್ಲಿ ಪೂರ್ಣಗೊಳಿಸಲು ಉದ್ದೇಶಿಸಿದೆ ಎಂದರು.
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕುಡಿಯುವ ನೀರಿನ, 1ನೇ ಕಂತು ಅನುದಾನ ಕ್ರಿಯಾ ಯೋಜನೆಗೆ ನೀಡಲಾಗಿದ್ದು, ಒಟ್ಟು 8 ಕಾಮಗಾರಿಗಳಲ್ಲಿ 4 ಪೂರ್ಣಗೊಂಡಿದ್ದು, ಉಳಿದ ಕಾಮಗಾರಿಗಳು ಶೀಘ್ರದಲ್ಲಿ ಮುಗಿಯುವ ಹಂತದಲ್ಲಿರುತ್ತದೆ. 2ನೇ ಕಂತು ಅನುದಾನಕ್ಕೆ ಸಂಬಂಧಿಸಿದಂತೆ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.
ಪ್ರಸ್ತುತ ಸಾಲಿನ ಯಾದಗಿರಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಗೆ ಕುಡಿಯುವ ನೀರಿಗಾಗಿ ಬಿಡುಗಡೆ ಮಾಡಿರುವ ಅನುದಾನ ಯಾದಗಿರಿ, ಶಹಾಪೂರ, ಸುರಪುರ, ನಗರಸಭೆ ಹಾಗೂ ಗುರುಮಿಠಕಲ್, ಕೆಂಭಾವಿ, ಕಕ್ಕೇರಾ ಪುರಸಭೆ ಮತ್ತು ಹುಣಸಗಿ ಪಟ್ಟಣ ಪಂಚಾಯತ್ ಸೇರಿ ಜಿಲ್ಲೆಯಾದ್ಯಂತ ಒಟ್ಟು 50.96 ಕೋ. ರೂ. ಗಳ ಅನುದಾನ ಸರ್ಕಾರದಿಂದ ಬಿಡುಗಡೆಯಾಗಿದೆ ಎಂದು ತಿಳಿಸಿದರು.
ಎಸ್ಎಫ್‌ಸಿ ಕುಡಿಯುವ ನೀರು ಅನುದಾನವು ನೇರವಾಗಿ ನಗರ ಸ್ಥಳೀಯ ಸಂಸ್ಥೆಗಳಿಗೆ ಬಿಡುಗಡೆಯಾಗಿದ್ದು, ಶಹಾಪೂರ, ಗುರುಮಿಠಕಲ್, ಕೆಂಭಾವಿ, ಕಕ್ಕೇರಾ ಸಂಸ್ಥೆಗಳ ಕ್ರಿಯಾ ಯೋಜನೆ ಅನುಮೋದನೆಯಾಗಿದ್ದು, ಸುರಪುರ ಹಾಗೂ ಹುಣಸಗಿ ಕ್ರಿಯಾ ಯೋಜನೆಗೆ ಅನುಮೋದನೆ ನೀಡಬೇಕಾಗಿದೆ, ಯಾದಗಿರಿಯಿಂದ ಮಾತ್ರ ಕ್ರಿಯಾ ಯೋಜನೆ ಪಡೆಯಬೇಕಾಗಿದೆ ಸೂಚಿಸಿದರು.
ಕುಡಿಯುವ ನೀರು ಸರಬರಾಜು ಯೋಜನೆಗಳು ಮಂಡಳಿಯಿಂದ ಅನುಷ್ಠಾನಗೊಂಡು ನಿರ್ವಹಣೆಯಲ್ಲಿರುವ ಯೋಜನೆಗಳಡಿ ಸುರಪುರ ನಗರದ 2ನೇ ಹಂತದ ಕುಡಿಯುವ ನೀರು ಸರಬರಾಜು ಯೋಜನೆಯನ್ನು 2023ರ ಮಾ.18 ರಂದು ಪೂರ್ಣಗೊಳಿಸಿ ಚಾಲನೆಗೊಳಿಸಿದೆ. ಈ ಯೋಜನೆಯ 5 ವರ್ಷದ ನಿರ್ವಹಣೆಯಂತೆ 2023ರ ಏ.1 ರಿಂದ ಪ್ರಾರಂಭಿಸಲಾಗಿದೆ. ಈ ಯೋಜನೆಯಿಂದ ಸುರಪುರ ನಗರಕ್ಕೆ 24*7 ನಿರಂತರ ನೀರು ಸರಬರಾಜು ಮಾಡಲಾಗುತ್ತಿದೆ ಎಂದರು.
ಶಹಾಪೂರ ನಗರಕ್ಕೆ ಸನ್ನತ್ತಿ ಬ್ರಿಡ್ಜ ಕಮ್ ಬ್ಯಾರೇಜ್ ಮೂಲಕ ಸಗಟು ಕುಡಿಯುವ ನೀರು ಸರಬರಾಜು ಯೋಜನೆಯ ಪೂರ್ಣಗೊಳ್ಳುವ ಹಂತದಲ್ಲಿರುತ್ತದೆ. ಈ ಯೋಜನೆಯನ್ನು 2025ರ ಜೂ.30 ರಂದು ಚಾಲನೆಗೊಳಿಸಲು ಉದ್ದೇಶಿಸಿದೆ. ಶಹಾಪೂರ ನಗರದ ಒಳಚರಂಡಿ ಯೋಜನೆಯ ಸರ್ಕಾರದಿಂದ ಅನುಮೋದನೆಯಾಗಿರುತ್ತದೆ. ಈ ಯೋಜನೆಯ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿರುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಯಾದಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು, ಗುರುಮಿಠಕಲ್ ವಿಧಾನಸಭಾ ಕ್ಷೇತ್ರದ ಶಾಸಕ ಶರಣಗೌಡ ಕಂದುಕೂರ, ಸುರಪುರ ವಿಧಾನಸಭಾ ಕ್ಷೇತ್ರದ ಶಾಸಕ ರಾಜಾ ವೇಣುಗೋಪಾಲ ನಾಯಕ, ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಯಾದಗಿರಿ ನಗರಸಭೆ ಪೌರಾಯುಕ್ತ ಉಮೇಶ ಚವ್ಹಾಣ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.