ಯಾದಗಿರಿ | ತಾಲೂಕು ಆಡಳಿತದ ವತಿಯಿಂದ ಮಹರ್ಷಿ ಭಗೀರಥ ಜಯಂತಿ ಆಚರಣೆ
ತಪಸ್ಸಿನಿಂದ ಧರೆಗೆ ಗಂಗೆಯನ್ನು ತಂದವರು ಮಹರ್ಷಿ ಭಗೀರಥ : ಶರಣಬಸವ

ಸುರಪುರ : ಧರೆಯಲ್ಲಿ ಜನರು ನೀರಿಗಾಗಿ ಹಾಹಾಕಾರವಿದ್ದ ಸಂದರ್ಭದಲ್ಲಿ ತಮ್ಮ ತಪಸ್ಸಿನ ಮೂಲಕ ಧರೆಗೆ ಗಂಗೆಯನ್ನು ತಂದ ಮಹರ್ಷಿ ಭಗೀರಥರು ನಮಗೆಲ್ಲ ಆದರ್ಶರಾಗಿದ್ದಾರೆ ಎಂದು ಶಿಕ್ಷಕ ಶರಣಬಸವ ಗೋನಾಲ ತಿಳಿಸಿದರು.
ತಾಲೂಕು ಆಡಳಿತದಿಂದ ನಗರದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ಭಗೀರಥ ಜಯಂತಿಯಲ್ಲಿ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಆರಂಭದಲ್ಲಿ ಮಹರ್ಷಿ ಭಗೀರಥರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಎಲ್ಲರು ಪುಷ್ಪಾರ್ಚನೆ ಮಾಡಿ ವಂದಿಸಿದರು. ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಹುಸೇನಸಾಬ್ ಎ.ಸರಕಾವಸ್ ಕಾರ್ಯಕ್ರಮದ ಕುರಿತು ಮಾತನಾಡಿದರು. ತಾಲೂಕು ಉಪ್ಪಾರ ಸಮಾಜದ ಅಧ್ಯಕ್ಷ ಮಾನಪ್ಪ ಎಮ್.ಜಿ ಗೋನಾಲ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಡಾ.ಮುಕುಂದ ಯಾನಗುಂಟಿ, ಗೌರವಾಧ್ಯಕ್ಷ ರಾಮಚಂದ್ರ ಪೂಜಾರಿ, ಪ್ರ.ಕಾರ್ಯದರ್ಶಿ ಶಂಕರ ಬಡಿಗೇರ ಹಸನಾಪುರ, ವೆಂಕಟೇಶ ಗದ್ವಾಲ್, ವೆಂಕಟೇಶ ಗೋನಾಲ, ನಾರಾಯಣ ಕಂಡಕ್ಟರ್ ಹಸನಾಪುರ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ತಾಲೂಕು ಆಡಳಿತದ ಕಾರ್ಯಕ್ರಮ ಅಂಗವಾಗಿ ತಾಲೂಕು ಉಪ್ಪಾರ ಸಮಾಜದಿಂದ ನಗರದ ರಂಗಂಪೇಟೆಯ ಮಹರ್ಷಿ ಭಗೀರಥ ವೃತ್ತದಿಂದ ತಹಶೀಲ್ದಾರ್ ಕಚೇರಿವರೆಗೆ ಬೈಕ್ ರ‍್ಯಾಲಿ ನಡೆಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ತಾಲೂಕು ಉಪ್ಪಾರ ಸಮಾಜದಿಂದ ರಂಗಂಪೇಟೆಯ ಮಹರ್ಷಿ ಭಗೀರಥ ವೃತ್ತದಲ್ಲಿ ಮಹರ್ಷಿ ಭಗೀರಥ ಜಯಂತಿ ಆಚರಣೆ ಮಾಡಿ, ಭಗೀರಥರ ನಾಮಫಲಕಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಘೋಷಣೆಗಳ ಕೂಗಿ ಸಿಹಿ ಹಂಚಿ ಆಚರಿಸಿದರು.







