ಯಾದಗಿರಿ | ಸೈನಿಕರನ್ನು ಬೆಂಬಲಿಸಲು ಮೇ 17ರಂದು ತಿರಂಗಾ ಯಾತ್ರೆ : ಟಿ.ಎನ್. ಭೀಮುನಾಯಕ

ಯಾದಗಿರಿ : ಪಹಲ್ಗಾಮ್ ದಾಳಿಗೆ ಪ್ರತಿಕಾರವಾಗಿ ಆಪರೇಷನ್ ಸಿಂಧೂರ ಕಾರ್ಯಾಚರಣೆ ಯಶಸ್ವಿಯಾಗಿರುವ ಹಿನ್ನೆಲೆ ಸೇನೆಯ ಜೊತೆಗೆ ದೇಶ ಇದೆ ಎಂದು ಸಾರಲು ಜಿಲ್ಲೆಯ ಸರ್ವ ಸಂಘಟನೆಗಳು ಸೇರಿದಂತೆ ಜಿಲ್ಲೆಯ ಎಲ್ಲ ಜನತೆಯ ಜೊತೆಗೂಡಿ ಮೇ 17ರಂದು ಸಂಜೆ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಪ್ರಕಟಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 5 ಗಂಟೆಗೆ ನಗರದ ಮೈಲಾಪುರ ಬೇಸ್ ನಿಂದ ಚಕ್ರಕಟ್ಟೆ ಮಾರ್ಗವಾಗಿ ಗಾಂಧಿ ವೃತ್ತದವರೆಗೆ ತಿರಂಗಾ ಯಾತ್ರೆ ಮಾಡಿ ನಮ್ಮ ದೇಶದ ಸೈನಿಕರೊಂದಿಗೆ ದೇಶದ ಜನತೆ ಇದ್ದೇವೆ ಎಂದು ಸಾರುವ ಕಾರ್ಯಕ್ರಮ ಇದಾಗಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ಸಂಘ ಸಂಸ್ಥೆಗಳು ಸ್ವಯಂ ಪ್ರೇರಿತವಾಗಿ ಪಾಲ್ಗೊಳ್ಳಲು ನಿರ್ಣಯಿಸಿದ್ದು, ಇದಕ್ಕೆ ವಾಣಿಜ್ಯೋದ್ಯಮಿಗಳ ಸಂಘ, ವರ್ತಕರ ಸಂಘ, ವಿವಿಧ ವ್ಯಾಪಾರಿ ಸಂಘಟನೆಗಳು ಸ್ವಯಂ ಪ್ರೇರಿತವಾಗಿ ಪಾಲ್ಗೊಳ್ಳುತ್ತಿದ್ದಾರೆ.
ನಂತರ ಗಾಂಧಿವೃತ್ತದಲ್ಲಿ ಬಹಿರಂಗ ಸಭೆ ನಡೆಯಲಿದ್ದು, ಆಪರೇಷನ್ ಸಿಂಧೂರ ವೇಳೆ ದೇಶಕ್ಕಾಗಿ ಪ್ರಾಣತೆತ್ತ ವೀರ ಯೋಧರಿಗೆ ನಮನ ಸಲ್ಲಿಸುವ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.
ವಾಣಿಜ್ಯೋದ್ಯಮಿಗಳ ಸಂಘದ ಜಿಲ್ಲಾಧ್ಯಕ್ಷ ದಿನೇಶ ಜೈನ್ ದೊಖಾ, ವಕೀಲರ ಸಂಘದ ಜಿಲ್ಲಾಧ್ಯಕ್ಷ ಸಿ.ಎಸ್.ಮಾಲಿಪಾಟೀಲ್ ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ವರ್ತಕರಾದ ಹನುಮಾನದಾಸ ಮುಂದಡಾ, ರಾಜೇಶ್ ಜೈನ, ನ್ಯಾಯವಾದಿ ರಾಜಕುಮಾರ ದೊಡಮನಿ, ನ್ಯಾಯವಾದಿ ಶರಣಗೌಡ ಅಲ್ಲಿಪುರ, ಚೆನ್ನಮಲ್ಲಿಕಾರ್ಜುನ ಅಕ್ಕಿ ಸೇರಿದಂತೆ ಇನ್ನಿತರ ವರ್ತಕರು ಉಪಸ್ಥಿತರಿದ್ದರು.







