Yadgiri | ಆರೆಸ್ಸೆಸ್ ಪಥಸಂಚಲನದಲ್ಲಿ ಭಾಗವಹಿಸಿದ ಆರೋಪ: ಇಬ್ಬರು ಶಿಕ್ಷಕರು ಅಮಾನತು

ಸಾಂದರ್ಭಿಕ ಚಿತ್ರ
ಯಾದಗಿರಿ/ಹುಣಸಗಿ: ಆರೆಸ್ಸೆಸ್ ಪಥಸಂಚಲನದಲ್ಲಿ ಭಾಗವಹಿಸಿ ಸೇವಾ ನಿಯಮ ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಹುಣಸಗಿ ತಾಲೂಕಿನ ಇಬ್ಬರು ಸರ್ಕಾರಿ ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ.
ಯಾದಗಿರಿ ಡಿಡಿಪಿಐ ಚನ್ನಬಸವ ಮುಧೋಳ ಅವರು ಕರ್ನಾಟಕ ನಾಗರಿಕ ಸೇವಾ ನಿಯಮಗಳು–1957ರ ನಿಯಮ 10(1)ರ ಅಡಿ ಅಮಾನತು ಆದೇಶ ಹೊರಡಿಸಿದ್ದಾರೆ.
ಕುಪ್ಪಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಅಣ್ಣಾಸಾಹೇಬ ದೇಶಮುಖ ಹಾಗೂ ಹುಣಸಗಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಸಹ ಶಿಕ್ಷಕ ಗುರುರಾಜ ಜೋಶಿ ಅಮಾನತುಗೊಂಡವರು.
ಶಿಕ್ಷಕರು ಆರೆಸ್ಸೆಸ್ನಲ್ಲಿ ಹುದ್ದೆ ಹೊಂದಿದ್ದು, ಸಂಘಟನೆಯ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಸೇವಾ ನಿಯಮ ಉಲ್ಲಂಘಿಸಿ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಅಮಾನತು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರನ್ನೂ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 7ರಿಂದ 8 ತಿಂಗಳ ಕಾಲ ಇಲಾಖೆಯಿಂದ ಯಾವುದೇ ಕ್ರಮ ಕೈಗೊಳ್ಳಲಾಗಿರಲಿಲ್ಲ ಎನ್ನಲಾಗಿದೆ. ಇದನ್ನು ಪ್ರಶ್ನಿಸಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ವತಿಯಿಂದ ಅಂದಿನ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ದೂರು ಸಲ್ಲಿಸಿ, ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿತ್ತು.
“ಸಂವಿಧಾನದ ಜಾತ್ಯತೀತ ಮೌಲ್ಯಗಳಿಗೆ ವಿರುದ್ಧವಾಗಿ ವರ್ತಿಸಿದ ಶಿಕ್ಷಕರ ವಿರುದ್ಧ ನಿರಂತರವಾಗಿ ಹೋರಾಟ ನಡೆಸಿದ್ದೇವೆ. ಪ್ರಿಯಾಂಕ್ ಖರ್ಗೆ ಹಾಗೂ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಲಾಗಿತ್ತು. ನಮ್ಮ ಮನವಿಗೆ ಸ್ಪಂದಿಸಿ ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ. ಇದು ಕೇವಲ ಅಮಾನತು ಅಲ್ಲ, ನಮ್ಮ ಸ್ವಾಭಿಮಾನದ ಗೆಲುವು” ಎಂದು ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಜಿಲ್ಲಾಧ್ಯಕ್ಷ ಜುಮ್ಮಣ್ಣ ಗುಡಿಮನಿ ತಿಳಿಸಿದ್ದಾರೆ.






