ಯಾದಗಿರಿ | ವೇಣುಗೋಪಾಲ ನಾಯಕರಿಗೆ ಧಾರವಾಡ ವಿವಿಯಿಂದ ಸನ್ಮಾನ

ಸುರಪುರ: ಕೇಂದ್ರ ಸರಕಾರ ನಡೆಸುವ ಎನ್.ಇ.ಟಿ- ಜೆ.ಆರ್.ಎಫ್ ನಲ್ಲಿ ಎ.ಐ.ಆರ್- 196ನೇ ರ‍್ಯಾಂಕ್ ಪಡೆದ ವಿದ್ಯಾರ್ಥಿ ವೇಣುಗೋಪಾಲ ನಾಯಕ ಅವರಿಗೆ ಧಾರವಾಡ ವಿಶ್ವವಿದ್ಯಾಲಯದಿಂದ ಸನ್ಮಾನಿಸಿ ಗೌರವಿಸಲಾಗಿದೆ.
ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಪರಿಶಿಷ್ಟ ಪಂಗಡ ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಸಂಘ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ಪರಿಶಿಷ್ಟ ಪಂಗಡ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದಪುರಿ ಮಹಾಸ್ವಾಮೀಜಿ, ಕರ್ನಾಟಕ ಸರಕಾರದ ಕಾರ್ಮಿಕ ಸಚಿವ ಸಂತೋಷ ಲಾಡ್, ಧಾರವಾಡ ವಿವಿಯ ಸಿಂಡಿಕೇಟ್ ಸದಸ್ಯ ಡಾ.ಕಲ್ಮೇಶ ಸೇರಿದಂತೆ ವಿಶ್ವವಿದ್ಯಾಲಯದ ಅನೇಕ ವಿಭಾಗಗಳ ಮುಖ್ಯಸ್ಥರು ಭಾಗವಹಿಸಿ ಸನ್ಮಾನಿಸಿ ಗೌರವಿಸಿದರು.
ಸಾಧಕ ವೇಣುಗೋಪಾಲ ನಾಯಕ ಅವರ ಸಾಧನೆಗೆ ಅವರ ಅಭಿಮಾನಿಗಳ ವೇದಿಕೆ ಅಧ್ಯಕ್ಷ ಬಸವರಾಜ ಕೆ.ಹರ್ಷ ವ್ಯಕ್ತಪಡಿಸಿದ್ದಾರೆ. ವೇಣುಗೋಪಾಲ ನಾಯಕ ಅವರು ದೇಶದಲ್ಲಿಯೇ 196ನೇ ರ‍್ಯಾಂಕ್ ಪಡೆಯುವ ಮೂಲಕ ಕಲ್ಯಾಣ ಕರ್ನಾಟಕದ ಜೊತೆಗೆ ನಮ್ಮ ಸುರಪುರದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಅವರ ತಂದೆ ವೆಂಕೋಬ ದೊರೆ ಒಬ್ಬ ಹೋರಾಟಗಾರರು ಅವರ ಮಗನ ಸಾಧನೆ ನಮ್ಮ ಭಾಗದ ಎಲ್ಲ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು ಎನ್ನುವ ಉದ್ದೇಶ ದಿಂದ ಇಲ್ಲಿಯೂ ಒಂದು ಬೃಹತ್ ಕಾರ್ಯಕ್ರಮ ಹಮ್ಮಿಕೊಂಡು ವೇಣುಗೋಪಾಲ ನಾಯಕ ಅವರಿಗೆ ಅಭಿನಂದಿಸಲಾಗುವುದು ಎಂದು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.







