ಯಾದಗಿರಿ | ವಿದ್ಯಾರಣ್ಯ ಶಾಲೆ ಶಿಕ್ಷಕಿಯಿಂದ ವಿದ್ಯಾರ್ಥಿಗೆ ಹಲ್ಲೆ ಆರೋಪ : ಶಸ್ತ್ರ ಚಿಕಿತ್ಸೆಗೆ ತಗುಲುವ ಹಣ ಒದಗಿಸುವಂತೆ ದಲಿತ ಸಂಘರ್ಷ ಸಮಿತಿ ಆಗ್ರಹ

ಯಾದಗಿರಿ: ನಗರದ ವಿದ್ಯಾರಣ್ಯ ಶಾಲೆಯ ಶಿಕ್ಷಕಿಯೊಬ್ಬರು ತರಗತಿಯಲ್ಲಿ ವಿದ್ಯಾರ್ಥಿಯ ತಲೆಗೆ ಹೊಡೆದಿದ್ದು, ಬಾಲಕನ ಚಿಕಿತ್ಸೆಗೆ ತಗುಲುವ ವೆಚ್ಚ ಭರಿಸಬೇಕು. ಒಂದು ವೇಳೆ ವೆಚ್ಚ ಭರಿಸದೇ ಹೋದಲ್ಲಿ ಜೂ.13ರಂದು ಶಾಲೆಯ ಮುಖ್ಯದ್ವಾರ ಬಂದ್ ಮಾಡಿ ಮುಳ್ಳು ಬೇಲಿ ಹಚ್ಚಿ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ( ಕ್ರಾಂತಿಕಾರಿ ) ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾರಣ್ಯ ಶಾಲೆಯಲ್ಲಿ ಆರನೆಯ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ಮನೀಷ್ ಎನ್ನುವ ವಿದ್ಯಾರ್ಥಿಗೆ ಶಾಲೆಯ ಶಿಕ್ಷಕಿ ತಲೆಗೆ ಕಟ್ಟಿಗೆ ರೂಲ್ ನಿಂದ ಹೊಡೆದಿದ್ದು, ತಲೆಗೆ ಬಲವಾದ ಪೆಟ್ಟು ಬಿದ್ದಿದೆ ಎಂದು ಅವರು ಆರೋಪಿಸಿದರು.
ಘಟನೆಯ ನಂತರ ವಿದ್ಯಾರ್ಥಿಯನ್ನು ಸೋಲಾಪುರ ದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಆದರೂ ವಿದ್ಯಾರ್ಥಿ ಗುಣಮುಖನಾಗದ ಕಾರಣ ಬೆಂಗಳೂರಿನ ನಾರಾಯಣ ಹಾಗೂ ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಶಸ್ತ್ರ ಚಿಕಿತ್ಸೆ ಅಗತ್ಯವಿದ್ದು, ಸುಮಾರು 8 ರಿಂದ 10 ಲಕ್ಷ ರೂ. ಖರ್ಚಾಗಲಿದ್ದು, ಹಣ ಹೊಂದಿಸಿಕೊಂಡು ಬಂದರೆ ಶಸ್ತ್ರ ಚಿಕಿತ್ಸೆ ನೀಡುವುದಾಗಿ ವೈದ್ಯರು ಹೇಳಿದ್ದಾರೆ. ಈ ಬಗ್ಗೆ ವಿದ್ಯಾರಣ್ಯ ಶಾಲೆಗೆ ಸಂಬಂಧಪಟ್ಟವರನ್ನು ಭೇಟಿ ನೀಡಿದ್ದಾರೆ. ಜೊತೆಗೆ ಯಾದಗಿರಿ ಡಿಡಿಪಿಐ ಅವರಿಗೂ ಕೂಡಾ ಮನವಿ ಪತ್ರ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹಾಗಾಗಿ, ವಿದ್ಯಾರ್ಥಿಯ ಚಿಕಿತ್ಸೆ ಬೇಕಾಗುವ ಹಣವನ್ನು ಶಾಲಾ ಮಂಡಳಿ ಬರಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅಜೀಜ್ ಸಾಬ್ ಐಕೂರು, ಮಲ್ಲಿಕಾರ್ಜುನ ಕುರಕುಂದಿ, ಮಹಾದೇವಪ್ಪ ಬಿಜಾಸಪೂರಕರ್, ಮಾನಪ್ಪ ಬಿಜಾಸಪೂರಕರ್ ಸೇರಿದಂತೆ ಹಲವರಿದ್ದರು.