Yadgiri | ಒಳಮೀಸಲಾತಿ ಅನ್ಯಾಯ ಸರಿಪಡಿಸದಿದ್ದರೆ ಹೋರಾಟ : ಶಾಸಕ ಪ್ರಭು ಚವ್ಹಾಣ್

ಯಾದಗಿರಿ : ಒಳಮೀಸಲಾತಿ ಹಂಚಿಕೆಯಲ್ಲಿ ಬಂಜಾರ ಸಮಾಜಕ್ಕೆ ಅನ್ಯಾಯವಾಗಿದ್ದು, ಸರ್ಕಾರ ತಕ್ಷಣ ಅದನ್ನು ಸರಿಪಡಿಸದಿದ್ದರೆ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಔರಾದ್ ಶಾಸಕ ಹಾಗೂ ಬಂಜಾರ ಸಮಾಜದ ಹಿರಿಯ ಮುಖಂಡ ಪ್ರಭು ಚವ್ಹಾಣ್ ಎಚ್ಚರಿಸಿದರು.
ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ದಿಕ್ಸೂಚಿ ಬಂಜಾರ ಕರ್ನಾಟಕ ವೇದಿಕೆಯಡಿ ನಡೆದ “ನಮ್ಮ ಮೀಸಲಾತಿ–ನಮ್ಮ ಹಕ್ಕು” ಚಿಂತನ ಸಭೆಯಲ್ಲಿ ಮಾತನಾಡಿದ ಅವರು, ಅವೈಜ್ಞಾನಿಕವಾಗಿ ಒಳಮೀಸಲಾತಿ ಹಂಚುವ ಮೂಲಕ ಸರ್ಕಾರ ಬಂಜಾರ ಸಮಾಜದ ವಿರುದ್ಧ ಸೇಡಿನ ರಾಜಕಾರಣ ನಡೆಸುತ್ತಿದೆ ಎಂದು ಆರೋಪಿಸಿದರು.
ಈ ಅನ್ಯಾಯವನ್ನು ಕೂಡಲೇ ಸರಿಪಡಿಸದಿದ್ದರೆ ಜಿಲ್ಲಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಕಚೇರಿಗಳಿಗೆ ಮುತ್ತಿಗೆ, ರೈಲು ತಡೆ (ರೈಲ್ ರೋಕೋ) ಮತ್ತು ರಾಷ್ಟ್ರೀಯ ಹೆದ್ದಾರಿ ತಡೆ ಸೇರಿದಂತೆ ರಾಜ್ಯವ್ಯಾಪಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹಿಂದಿನ ಬಿಜೆಪಿ ಸರ್ಕಾರ ಬಂಜಾರ ಸಮಾಜಕ್ಕೆ ಸಮಾನ ಮೀಸಲಾತಿ ಸೇರಿದಂತೆ ಸಂತ ಸೇವಾಲಾಲ್ ಜಯಂತಿ ಆಚರಣೆ, ಬಂಜಾರ ಅಭಿವೃದ್ಧಿ ನಿಗಮ ಹಾಗೂ ಬಂಜಾರ ಭವನಗಳಂತಹ ಹಲವು ಸೌಲಭ್ಯಗಳನ್ನು ಕಲ್ಪಿಸಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಸಮಾಜದ ಮೀಸಲಾತಿ ಹಕ್ಕನ್ನು ಕಸಿದುಕೊಂಡಿದೆ ಎಂದು ದೂರಿದರು.
ಮಾಜಿ ಸಂಸದ ಡಾ. ಉಮೇಶ್ ಜಾಧವ ಮಾತನಾಡಿ, ಗುರುಮಠಕಲ್ ಕ್ಷೇತ್ರದಲ್ಲಿ ಬಂಜಾರ ಸಮುದಾಯದ ಬೆಂಬಲದಿಂದ ರಾಜಕೀಯವಾಗಿ ಬೆಳೆದ ನಾಯಕರು ಸಮಾಜಕ್ಕೆ ನ್ಯಾಯ ಒದಗಿಸಿಲ್ಲ ಎಂದು ಆರೋಪಿಸಿದರು. ಒಳಮೀಸಲಾತಿ ಹಂಚಿಕೆಯಿಂದ ಬಂಜಾರ, ಭೋವಿ, ಕೊರಮ ಹಾಗೂ ಕೊರಚ ಸಮುದಾಯಗಳಿಗೆ ಅನ್ಯಾಯವಾಗಿದ್ದು, ಅದನ್ನು ಸರಿಪಡಿಸುವವರೆಗೆ ಹೋರಾಟ ಮುಂದುವರಿಯಲಿದೆ ಎಂದರು.
ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಜನಸಂಖ್ಯೆ ಹಾಗೂ ಸಾಮಾಜಿಕ ಹಿಂದುಳಿದ ಸ್ಥಿತಿಯನ್ನು ಆಧರಿಸಿ ನ್ಯಾಯಯುತ ಒಳಮೀಸಲಾತಿ ನೀಡಬೇಕು. ಇಲ್ಲವಾದರೆ ರಾಜ್ಯಾದ್ಯಂತ “ಕಾಂಗ್ರೆಸ್ ಹಟಾವೋ–ತಾಂಡಾ ಬಚಾವೋ” ಚಳವಳಿ ಆರಂಭಿಸಲಾಗುವುದು ಎಂದು ಎಚ್ಚರಿಸಿದರು.
ಸಭೆಯಲ್ಲಿ ಮಾಜಿ ಸಂಸದ ಡಾ. ಉಮೇಶ್ ಜಾಧವ, ಶಾಸಕರಾದ ಡಾ. ಚಂದ್ರು ಲಮಾಣಿ, ಕೃಷ್ಣ ನಾಯಕ್ ಸೇರಿದಂತೆ ಬಂಜಾರ ಸಮಾಜದ ಮುಖಂಡರು ಮತ್ತು ನೂರಾರು ಮಂದಿ ಭಾಗವಹಿಸಿದ್ದರು.
ವೇದಿಕೆಯಲ್ಲಿ ಸಮಾಜದ ಪ್ರಮುಖರಾದ ದೇವರಾಜ ನಾಯಕ, ಜನಾರ್ಧನ ರಾಠೋಡ್, ಕಿಶನ, ರವಿ ರಾಠೋಡ್ ಮುದ್ನಾಳ್, ಕಿಶನ ರಾಠೋಡ್, ಲಿಂಬಾ ನಾಯಕ, ಸುರೇಶ ಚವ್ಹಾಣ, ಸುರೇಶ ರಾಠೋಡ, ಬಂಗಾರು ರಾಠೋಡ, ಸುನೀತಾ ಚವ್ಹಾಣ, ಕಮಲಿಬಾಯಿ ಹತ್ತಿಕುಣಿ, ಲಲಿತಾಬಾಯಿ ಸೇರಿದಂತೆಯೇ ಇತರರಿದ್ದರು.
ಜಿಲ್ಲೆಯ ವಿವಿಧಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಸಮಾಜದ ಜನರು ಆಗಮಿಸಿದ್ದರು






