ಸುಪ್ತ ಪ್ರತಿಭೆ ಪ್ರದರ್ಶನಕ್ಕೆ ಯುವಜನೋತ್ಸವ ಸಹಕಾರಿ: ಯಾದಗಿರಿ ಡಿಸಿ ಹರ್ಷಲ್ ಭೋಯರ್

ಯಾದಗಿರಿ: ಯುವಜನಾಂಗ ತಮ್ಮ ಸುಪ್ತ ಪ್ರತಿಭೆ ಪ್ರದರ್ಶಿಸಲು ಯುವಜನೋತ್ಸವ ಸದಾವಕಾಶದ ಮುಖ್ಯವೇದಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಹೇಳಿದರು.
ನಗರದ ಪದವಿ ಮಹಾವಿದ್ಯಾಲಯದಲ್ಲಿ ಇಂದು ಜಿಲ್ಲಾಡಳಿತ , ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಮತ್ತು ಯುವಕ, ಯುವತಿ ಸಂಘಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 2025-26 ನೇ ಸಾಲಿನ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಲಾ ಪ್ರತಿಭೆಗಳನ್ನು ಪ್ರದರ್ಶಿಸಲು ಯುವಜನೋತ್ಸವ ಅತ್ಯಂತ ಅನುಕೂಲವಾಗಿವೆ.ಯುವ ಜನಾಂಗ ಉತ್ಸಾಹದಿಂದ ಇದರಲ್ಲಿ ಭಾಗವಹಿಸಬೇಕು.ತಮ್ಮ ಪ್ರತಿಭೆ ಪ್ರದರ್ಶಿಸಿ ಮುಂದಿನ ಯುವಪೀಳಿಗೆಗೂ ಪ್ರೇರಣಾದಾಯಕರಾಗುವಂತೆ ಸಲಹೆ ನೀಡಿದರು.
ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಯುವಜನೋತ್ಸವ ಹಮ್ಮಿಕೊಳ್ಳುವ ಉದ್ದೇಶ ಹೊಂದಲಾಗಿದೆ. ಸಣ್ಣ ಪುಟ್ಟ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು, ಜಿಲ್ಲಾಡಳಿತ, ಸಾರ್ವಜನಿಕರು, ಯುವ ಸಮೂಹ,ಸಂಘ ಸಂಸ್ಥೆಗಳವರು ಸಹಕರಿಸಿ ಮುಂದೆ ನಡೆಯೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಪದವಿ ಕಾಲೇಜು ಪ್ರಾಂಶುಪಾಲ ಸುಭಾಸ್ ಚಂದ್ರ ಕೌಲಗಿ ಅವರು, ವ್ಯಕ್ತಿತ್ವ ವಿಕಸನಕ್ಕೆ ಇಂತಹ ಯುವಜನೋತ್ಸವ ಹೆಚ್ಚು ಸಹಕಾರಿ. ಗೊತ್ತು ಗುರಿ ಇಲ್ಲದೆ ನಡೆಯುತ್ತಿರುವ ಯುವಜನಾಂಗಕ್ಕೆ ಇಂತಹ ಉತ್ಸವಗಳು ಭವಿಷ್ಯ ರೂಪಿಸಿಕೊಳ್ಳಲು ಮುಖ್ಯ ವೇದಿಕೆಯಾಗಿವೆ.ಯುವಶಕ್ತಿಯ ಸದ್ಬಳಕೆಯಾಗಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಕಾಡ್ಲೂರ್ ಉದ್ಘಾಟಿಸಿದರು. ನಗರಸಭೆ ಉಪಾಧ್ಯಕ್ಷ ರುಕಯ್ಯಾ ಬೇಗಮ್,ಡಿವೈಎಸ್ಪಿ, ಸುರೇಶ್, ನಗರಸಭೆ ಸದಸ್ಯ ವಿಜಯ ಲಕ್ಷ್ಮಿ ಉಪಸ್ಥಿತರಿದ್ದರು.
ಯುವಜನಸೇವಾ ಹಾಗೂ ಕ್ರೀಡಾಧಿಕಾರಿ ರಾಜು ಬಾವಿ ಹಳ್ಳಿ ಸ್ವಾಗತಿಸಿದರು. ಫ್ರೊ. ಗುರುಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.







