ಜಿಪಂ ಹೊರಗುತ್ತಿಗೆ ನೌಕರರ ವಜಾ ಪ್ರಕರಣ | ನ್ಯಾಯಾಂಗ ನಿಂದನೆ ದೂರು: ಸರಕಾರದ ಮುಖ್ಯ ಕಾರ್ಯದರ್ಶಿ, ಸಿಇಒಗೆ ನೋಟಿಸ್

ರಾಯಚೂರು, ಜ.6: ಜಿಪಂ ವ್ಯಾಪ್ತಿಯ ಸ್ವಚ್ಛ ಭಾರತ್ ಮಿಷನ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಹೊರಗುತ್ತಿಗೆ ನೌಕರರಿಗೆ ಕೆಲಸದಿಂದ ತೆಗೆದು ಹಾಕಿದ ಪ್ರಕರಣದಲ್ಲಿ ನ್ಯಾಯಾಂಗ ನಿಂದನೆ ಆರೋಪದ ಮೇರೆಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಮುಖ್ಯ ಕಾರ್ಯದರ್ಶಿ, ಜಿಪಂ ಸಿಇಒ ಈಶ್ವರ್ ಕಾಂದು ಅವರಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗಲು ಆದೇಶ ಹೊರಡಿಸಲಾಗಿದೆ.
ಸುಮಾರು 15 ವರ್ಷಗಳಿಂದ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ನೌಕರರಿಗೆ ವಿನಾಕಾರಣ ಕೆಲಸದಿಂದ ತೆಗೆದುಹಾಕಲಾಗಿತ್ತು. ಈ ಕುರಿತು ಕೆಲವರು ಕಲಬುರಗಿ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ನ್ಯಾಯದ ಮೊರೆ ಹೋಗಿದ್ದರು. ಕಳೆದ ನ. 12ರಂದು ನ್ಯಾಯಾಲಯ ಹೊರಗುತ್ತಿಗೆ ನೌಕರರ ಪರವಾಗಿ ವಜಾ ಮಾಡದಂತೆ ಆದೇಶ ನೀಡಿತ್ತು, ಆದರೆ ನ್ಯಾಯಾಲಯದ ಆದೇಶಕ್ಕೆ ಬೆಲೆ ನೀಡದೇ ಜಿಪಂ ಸಿಇಒ ಕೆಲಸದಿಂದ ತೆಗೆದುಹಾಕಲಾದ ನೌಕರರ ಸ್ಥಾನಕ್ಕೆ ಬೇರೆಯವರನ್ನು ನೇಮಕ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿತ್ತು. ಇದನ್ನು ಖಂಡಿಸಿ ಜಿಲ್ಲಾ ಪಂಚಾಯತ್ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಎಚ್‌ಆರ್‌ಡಿ ಸಮಾಲೋಚಕರಾಗಿ ಕೆಲಸ ಮಾಡುತ್ತಿದ್ದ ಅನಿಲ್ ಎಂಬವರು ನ. 29ರಂದು ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿ, ರಾಯಚೂರು ಜಿ.ಪಂ ಸಿಇಒ ಈಶ್ವರ್ ಕಾಂದೂ ಹಾಗೂ ಇತರರನ್ನು ಪ್ರತಿದೂರುದಾರರಾಗಿ ಮಾಡಿ ಜನವರಿ 12ರಂದು ವಿಚಾರಣೆಗೆ ಹಾಜರಾಗಲು ನೋಟಿಸ್ ಜಾರಿ ಮಾಡಿದ್ದಾರೆ.
15 ವರ್ಷಗಳಿಂದ ಜಿಲ್ಲಾ ಪಂಚಾಯತ್‌ನಲ್ಲಿ ಪ್ರಾಮಾಣಿಕವಾಗಿ ನಿಷ್ಟೆಯಿಂದ ಸೇವೆ ಸಲ್ಲಿಸಿದ ನಮ್ಮನ್ನು ಏಕಾಏಕಿ ಕೆಲಸದಿಂದ ತೆಗೆದು ಹಾಕಿದ್ದು ನಮಗೆ ಮಾನಸಿಕ ಆಘಾತವಾಗಿದೆ. ನಮ್ಮ ಕುಟುಂಬದ ನಿರ್ವಹಣೆ ಮಾಡಲು ಕಷ್ಟವಾಗಿದೆ. ದಯವಿಟ್ಟು ರಾಯಚೂರು ಜಿಲ್ಲೆಯ ಪ್ರಜ್ಞಾವಂತ ಜನಪ್ರತಿನಿಧಿಗಳು ಮತ್ತು ಕಾರ್ಮಿಕ ಸಂಘಟನೆಗಳು ಮಧ್ಯ ಪ್ರವೇಶ ಮಾಡಿ ನೊಂದ ಸಿಬ್ಬಂದಿಗೆ ನ್ಯಾಯ ಕೊಡಿಸಲು ಮನವಿ ಮಾಡಿಕೊಳ್ಳುತ್ತೇವೆ.
ಹೆಸರು ಹೇಳಲು ಇಚ್ಛಿಸದ ಸಿಬ್ಬಂದಿ
ಹೊರಗುತ್ತಿಗೆ ನೌಕರರಿಂದ ಕಲಬುರಗಿ ಹೈಕೋರ್ಟ್ ನಲ್ಲಿ ದಾವೆ ಹೂಡಿದ್ದು ನಿಜ, ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಜ.12ರಂದು ಮುಖ್ಯ ಕಾರ್ಯದರ್ಶಿ ಹಾಗೂ ಸಿಇಒ ವಿಚಾರಣೆಗೆ ಹಾಜರಾಗಲಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿ ಇರುವ ಕಾರಣ ಹೆಚ್ಚು ಹೇಳಲಾರೆ
-ಶರಣಬಸವರಾಜ ಕೆಸರಟ್ಟಿ, ಜಿಪಂ ಯೋಜನಾ ನಿರ್ದೇಶಕ







