ಯಾದಗಿರಿ | ವಿಷಕಾರಿ ರಾಸಾಯನಿಕ ಹೊರಹಾಕುತ್ತಿರುವ ಕೈಗಾರಿಕೆಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಯಾದಗಿರಿ : ಗುರುಮಠಕಲ್ ಮತಕ್ಷೇತ್ರ ವ್ಯಾಪ್ತಿಯ ಕಡೇಚೂರು ಗ್ರಾಮದ ಖಾಸಗಿ ಕೈಗಾರಿಕೆಗಳು ವಿಷಕಾರಿ ರಾಸಾಯನಿಕ ಹೊರಹಾಕುತ್ತಿರುವುದರ ವಿರುದ್ಧ ಕಠಿಣ ಕ್ರಮ ಕೈಗೊಂಡು ಕಂಪನಿ ಬಂದ್ ಮಾಡಿಸಬೇಕೆಂದು ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಗುರುವಾರ ಸಂಘಟನೆಯ ಜಿಲ್ಲಾ ಅಧ್ಯಕ್ಷ ಬಿಎನ್ ವಿಶ್ವನಾಥ ನಾಯಕ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ವಿಷಕಾರಿ ರಾಸಾಯನಿಕ ಹೊರಹಾಕುತ್ತಿರುವುದರಿಂದ ಸುತ್ತಮುತ್ತಲ ಗ್ರಾಮಗಳಾದ ಕಣೇಕಲ್, ನೀಲಹಳ್ಳಿ, ಮಾಧ್ವಾರ, ಕರಿಬೆಟ್ಟ ಸೈದಾಪೂರ, ಬದ್ದೆಪಲ್ಲಿ, ದುಪ್ಪಲ್ಲಿ, ಸೌರಾಷ್ಟ್ರಹಳ್ಳಿ, ರಾಂಪುರ, ಬೆಳಗುಂದಿ, ಸಂಗವಾರ, ಬಾಲಚೇಡಗಳಿಗೂ ಅಲ್ಲದೇ ತೆಲಂಗಾಣ ರಾಜ್ಯದ ಕುಣಸಿ ಮುಂತಾದ ಹಳ್ಳಿಗಳವರೆಗೆ ಗಬ್ಬು ವಾಸನೆ ವಕ್ಕರಿಸುತ್ತಿದೆ. ಇದರಿಂದ ಗ್ರಾಮಸ್ಥರಲ್ಲಿ ತುರಿಕೆ ಕಜ್ಜಿಯಂತಹ ರೋಗಗಳು ಆರಂಭವಾಗಿದ್ದು, ಇದನ್ನು ನಿರ್ಲಕ್ಷ್ಯ ಮಾಡಿದಲ್ಲಿ ಕ್ಯಾನ್ಸರ್ ನಂತಹ ಮಾರಕ ರೋಗಗಳಿಗೆ ತುತ್ತಾಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಕಾರ್ಯದರ್ಶಿ ವಿಜಯಕುಮಾರ ಮೊಗದಂಪುರ, ಜಿಲ್ಲಾ ಪ್ರ.ಕಾರ್ಯದರ್ಶಿ ಶಿವರಾಜ ಗುತ್ತೇದಾರ, ಜಿಲ್ಲಾ ಕಾರ್ಯಾದ್ಯಕ್ಷ ದಶರಥ ಶೆಟ್ಟಿಗೇರಾ, ಜಿಲ್ಲಾ ಕಾರ್ಯದರ್ಶಿ ಭೀಮು ಪುಜಾರಿ, ಕಾರ್ಯದರ್ಶಿ ಅಶೋಕರಡ್ಡಿ ಯಲ್ಹೇರಿ, ನಾಗರಾಜ ರಾಮಸಮುದ್ರ, ಅಲ್ಪಸಂಖ್ಯಾತರ ಘಟಕ ಅದ್ಯಕ್ಷ ನವಾಜ ಖಾದ್ರಿ, ತಾ.ಅದ್ಯಕ್ಷ ಶರಣು ಹೊನಿಗೇರಿ, ನಗರಾಧ್ಯಕ್ಷ ಬಸ್ಸು ಮಡಿವಾಳ, ಸದ್ದಾಂ, ನಾಗಪ್ಪ ಹೊನಿಗೇರಿ, ಮಹೇಬೂಬ ಅಬ್ಬೆತುಮಕೂರು ಸೇರಿದಂತೆ ಅನೇಕರು ಇದ್ದರು.







