ನಾಲಗೆ ಕತ್ತರಿಸಲ್ಪಟ್ಟ ಮೂಗ ವರ್ಷ

PC: x.com/indiafreespeech
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ನಾಲಗೆಯಿದ್ದೂ ಮಾತನಾಡಲಾಗದ ಮೂಗ ವರ್ಷವೆಂದು 2025 ಗುರುತಿಸಲ್ಪಡುತ್ತಿದೆ. ಈ ಹಿಂದಿಗಿಂತ ಅತಿ ಹೆಚ್ಚು ವಾಕ್ ಸ್ವಾತಂತ್ರ್ಯ ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗಿರುವ ವರ್ಷ ಇದು ಎಂದು ಫ್ರೀ ಸ್ಪೀಚ್ ಕಲೆಕ್ಟಿವಲ್ ತನ್ನ ವರದಿಯಲ್ಲಿ ತಿಳಿಸಿದೆ. 2025ರಲ್ಲಿ ವಾಕ್ ಸ್ವಾತಂತ್ರ್ಯದ ಉಲ್ಲಂಘನೆಯ ಸುಮಾರು 14,875 ಪ್ರಕರಣಗಳು ದಾಖಲಾಗಿವೆ. ಎಲ್ಲಕ್ಕಿಂತ ಮುಖ್ಯವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಎತ್ತಿ ಹಿಡಿದ ಕಾರಣಕ್ಕಾಗಿಯೇ ಈ ದೇಶದಲ್ಲಿ ಎಂಟು ಪತ್ರಕರ್ತರು ಮತ್ತು ಒಬ್ಬ ಸಾಮಾಜಿಕ ಮಾಧ್ಯಮ ವ್ಯಕ್ತಿಯ ಹತ್ಯೆಗಳಾಗಿವೆ ಎಂದು ಫ್ರೀ ಸ್ಪೀಚ್ ಕಲೆಕ್ಟಿವ್ ಮಂಗಳವಾರ ಬಿಡುಗಡೆ ಮಾಡಿದ ತನ್ನ ವರದಿಯನ್ನು ವಿವರಿಸಿದೆ. ವಾಕ್ ಸ್ವಾತಂತ್ರ್ಯದ ಪ್ರಕರಣಗಳಲ್ಲಿ ಸೆನ್ಸರ್ಶಿಪ್, ನ್ಯಾಯಾಂಗ ನಿಷೇಧ ಆದೇಶಗಳು, ಶೈಕ್ಷಣಿಕ ಸ್ವಾತಂತ್ರ್ಯದ ನಿಯಂತ್ರಣ, ಚಲನಚಿತ್ರ ಪ್ರಮಾಣೀಕರಣಕ್ಕೆ ಸಂಬಂಧಿಸಿದ ನಿರ್ಬಂಧಗಳೂ ಸೇರಿವೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿದ ಕಾರಣಕ್ಕಾಗಿ 117 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯ ಉಲ್ಲಂಘನೆಗೆ ಸಂಬಂಧಿಸಿದ 40 ದಾಳಿಗಳಲ್ಲಿ 33 ಪತ್ರಕರ್ತರನ್ನು ಗುರಿಯಾಗಿಸಲಾಗಿದೆ. 19 ಪ್ರಕರಣಗಳಲ್ಲಿ 14 ಪತ್ರಕರ್ತರಿಗೆ ಮಾನಸಿಕ ದೈಹಿಕ ಕಿರುಕುಳವನ್ನು ನೀಡಲಾಗಿದೆ. ಪತ್ರಕರ್ತರು ತಮ್ಮ ಕೆಲಸದ ಸಮಯದಲ್ಲಿ ಬೆದರಿಕೆಗಳನ್ನು ಸ್ವೀಕರಿಸಿದ 12 ಪ್ರಕರಣಗಳು ದಾಖಲಾಗಿವೆ. ಎಂಟು ಪತ್ರಕರ್ತರನ್ನು ಹತ್ಯೆ ಮಾಡಲಾಗಿದ್ದು ಅವರಲ್ಲಿ ಇಬ್ಬರು ಉತ್ತರ ಪ್ರದೇಶ ರಾಜ್ಯಕ್ಕೆ ಸೇರಿದವರು. ಅಂಡಮಾನ್-ನಿಕೋಬಾರ್, ಛತ್ತೀಸ್ಗಡ, ಹರ್ಯಾಣ, ಕರ್ನಾಟಕ, ಒಡಿಶಾ ಹಾಗೂ ಉತ್ತರಾಖಂಡದಲ್ಲಿ ತಲಾ ಒಬ್ಬರನ್ನು ಹತ್ಯೆಗೈಯಲಾಗಿದೆ. ಪಂಜಾಬ್ನಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಬರೆದ ಕಾರಣಕ್ಕಾಗಿ ವ್ಯಕ್ತಿಯನ್ನು ಕೊಂದು ಹಾಕಲಾಗಿದೆ. ಕಾಶ್ಮೀರ ಸೇರಿದಂತೆ ಈಶಾನ್ಯ ಭಾರತದ ಪತ್ರಕರ್ತರು ಬಾಯಿ ತೆರೆದರೆ ಅವರನ್ನು ಯುಎಪಿಎ ಕಾಯ್ದೆಯಲ್ಲಿ, ದೇಶದ್ರೋಹಿಗಳೆಂಬಂತೆ ಬಿಂಬಿಸಿ ಸುಲಭದಲ್ಲಿ ಬಂಧಿಸಲಾಗುತ್ತದೆ. ತಮ್ಮ ನಿರಪರಾಧಿತ್ವವನ್ನು ಸಾಬೀತು ಮಾಡುವುದು ಅವರ ಪಾಲಿಗೆ ದುಸ್ಸಾಧ್ಯ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ. ವಾಕ್ ಸ್ವಾತಂತ್ರ್ಯದ ಉಲ್ಲಂಘನೆಯ ಹೆಸರಿನಲ್ಲಿ ಗುಜರಾತ್ನಲ್ಲಿ ಅತ್ಯಧಿಕ 108 ಪ್ರಕರಣಗಳು ದಾಖಲಾಗಿದ್ದರೆ, ಉತ್ತರ ಪ್ರದೇಶದಲ್ಲಿ 83 ಹಾಗೂ ಕೇರಳದಲ್ಲಿ 78 ವಾಕ್ ಸ್ವಾತಂತ್ರ್ಯ ಉಲ್ಲಂಘನೆಯ ಪ್ರಕರಣಗಳು ದಾಖಲಾಗಿವೆ ಎಂದು ವರದಿಗಳು ಹೇಳುತ್ತಿವೆ.
ವಾಕ್ ಸ್ವಾತಂತ್ರ್ಯದ ನೇರ ಬಲಿಪಶುಗಳು ಪತ್ರಕರ್ತರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪತ್ರಕರ್ತರ ಧ್ವನಿ ಕ್ಷೀಣವಾಗುತ್ತಿದೆ. ಬೃಹತ್ ಮಾಧ್ಯಮಗಳು ಕಾರ್ಪೊರೇಟ್ ತೆಕ್ಕೆಗೆ ಬೀಳುತ್ತಿರುವ ಸಂದರ್ಭದಲ್ಲಿ ಪ್ರಭುತ್ವದ ವಿರುದ್ಧ ಕಟುವಾಗಿ ಮಾತನಾಡುವ ಪತ್ರಕರ್ತರು ಅಲ್ಲಿಂದ ಬಲವಂತವಾಗಿ ಹೊರದಬ್ಬಲ್ಪಡುತ್ತಿದ್ದಾರೆ ಅಥವಾ ಅನಿವಾರ್ಯವಾಗಿ ಅಲ್ಲಿಂದ ತೆರಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳು ಪರ್ಯಾಯ ಮಾಧ್ಯಮಗಳೆಂದು ಗುರುತಿಸಲ್ಪಡುತ್ತಿವೆಯಾದರೂ, ಅವುಗಳು ಪೂರ್ಣ ಪ್ರಮಾಣದಲ್ಲಿ ಸ್ವತಂತ್ರ ಪತ್ರಕರ್ತರ ಧ್ವನಿಯಾಗಲು ವಿಫಲವಾಗುತ್ತಿವೆ. ಅವುಗಳೂ ಪರೋಕ್ಷವಾಗಿ ಹಿತಾಸಕ್ತಿಗಳ ಸೂತ್ರಕ್ಕೆ ತಕ್ಕಂತೆ ಕುಣಿಯುತ್ತಿವೆ. ಪ್ರಭುತ್ವದ ವಿರುದ್ಧ ಮಾತನಾಡುವ ಪತ್ರಕರ್ತ ವರ್ಷದಿಂದ ವರ್ಷಕ್ಕೆ ಒಂಟಿಯಾಗುತ್ತಿದ್ದಾನೆ. ಆತನನ್ನು ಬಲಿಪಶುವನ್ನಾಗಿಸುವುದು ವ್ಯವಸ್ಥೆಗೆ ಸುಲಭವಾಗುತ್ತಿದೆ. ಇದೇ ಸಂದರ್ಭದಲ್ಲಿ ಮಾಹಿತಿ ಹಕ್ಕು ಕಾಯ್ದೆಯನ್ನು ಸರಕಾರ ದುರ್ಬಲಗೊಳಿಸಿದೆ. ಮಾಹಿತಿ ಹಕ್ಕು ಕಾರ್ಯಕರ್ತರು ಕೂಡ ಜೀವವನ್ನು ಒತ್ತೆಯಿಟ್ಟು ಕೆಲಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಇತ್ತೀಚೆಗೆ ರಾಜ್ಯದ ಅಧಿವೇಶನದಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕರು ಪಕ್ಷಭೇದ ಮರೆತು ಒತ್ತಾಯ ಮಾಡಿದ ಘಟನೆ ನಡೆದಿತ್ತು. ಇದೇ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರರು, ಕಾರ್ಯಕರ್ತರು ಜಾತೀಯತೆ, ಅಸ್ಪಶ್ಯತೆ, ಕೋಮುವಾದ ಇವುಗಳ ಬಗ್ಗೆ ಮಾತನಾಡಿದರೆ ಅವರನ್ನು ಬಾಯಿ ಮುಚ್ಚಿಸುವ ಕೆಲಸ ಪರಿಣಾಮಕಾರಿಯಾಗಿ ನಡೆಯುತ್ತಿದೆ. ಕಾಂಗ್ರೆಸ್ ಮುಖಂಡ ರಾಹುಲ್ಗಾಂಧಿಯವರ ಮೇಲೆಯೇ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ. ಇನ್ನು ಸಾಮಾನ್ಯರ ಸ್ಥಿತಿಯೇನಾಗಬೇಕು?
ಆತಂಕಕಾರಿ ಅಂಶವೆಂದರೆ, ಒಂದೆಡೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನ ಮಾಡಲಾಗುತ್ತಿದೆಯಾದರೆ ಇನ್ನೊಂದೆಡೆ ದ್ವೇಷ ಭಾಷಣವನ್ನು, ಕೋಮುವಾದಿ ಹೇಳಿಕೆಗಳನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸಮರ್ಥಿಸಲಾಗುತ್ತಿದೆ. ಸಂವಿಧಾನ ವಿರೋಧಿ ಶಕ್ತಿಗಳನ್ನು ಖಂಡಿಸಿದರೆ, ಮನುವಾದಿ, ಕೋಮುವಾದಿ ಶಕ್ತಿಗಳನ್ನು ಟೀಕಿಸಿದರೆ ಅವರ ವಿರುದ್ಧ ಅವಸರದಿಂದ ಕ್ರಮ ತೆಗೆದುಕೊಳ್ಳುವ ಕಾನೂನು ವ್ಯವಸ್ಥೆ, ಸಮಾಜವನ್ನು ಒಡೆಯುವ, ಕೋಮು ಉದ್ವಿಗ್ನತೆಯನ್ನು ಸೃಷ್ಟಿಸುವ ಭಾಷಣಗಳಿಗೆ ಕಿವುಡನಂತೆ ನಟಿಸುತ್ತಿದೆ. ಇತ್ತೀಚೆಗೆ ರಾಜ್ಯ ಸರಕಾರ ದ್ವೇಷ ಭಾಷಣಗಳ ವಿರುದ್ಧ ಕಠಿಣ ಕಾನೂನೊಂದನ್ನು ಜಾರಿಗೊಳಿಸಿದೆ. ಆದರೆ ಈ ಕಾನೂನನ್ನು ಬಿಜೆಪಿ ಮತ್ತು ಸಂಘಪರಿವಾರ ಅಭಿವ್ಯಕ್ತಿ ಸ್ವಾತಂತ್ರ್ಯದ ದಮನ ಎಂದು ಬಿಂಬಿಸಲು ಮುಂದಾಗಿದೆ. ವಾಕ್ ಸ್ವಾತಂತ್ರ್ಯದ ಮೇಲೆ ನಡೆಯುತ್ತಿರುವ ದಾಳಿಯಿದು ಎಂದು ವಾದಿಸುತ್ತಿದೆ. ‘ನಾಳೆ ನಾವು ಅಧಿಕಾರಕ್ಕೆ ಬಂದರೆ ಇದೇ ಕಾನೂನನ್ನು ನಿಮ್ಮ ವಿರುದ್ಧ ಬಳಸುತ್ತೇವೆ’ ಎಂದು ಬೆದರಿಸುತ್ತಿದೆ. ಇದು ಅಸಾಧ್ಯವೇನೂ ಅಲ್ಲ. ಈಗಾಗಲೇ ಇರುವ ಕಠಿಣ ಕಾನೂನುಗಳನ್ನು ಕೇಂದ್ರ ಸರಕಾರ ಸಂವಿಧಾನಪರ, ಜನಪರ ಹೋರಾಟಗಾರರ ವಿರುದ್ಧ ಬಳಸುವಲ್ಲಿ ಯಶಸ್ವಿಯಾಗಿದೆ. ಆ ಕಾರಣದಿಂದಲೇ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿದ ನೂರಾರು ಕಾರ್ಯಕರ್ತರು ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ. ಯಾವುದು ದ್ವೇಷ ಭಾಷಣ, ಯಾವುದು ಅಲ್ಲ ಎನ್ನುವುದನ್ನು ನಿರ್ಧರಿಸುವುದು ಕಾನೂನು ವ್ಯವಸ್ಥೆ. ಆ ಕಾನೂನು ವ್ಯವಸ್ಥೆ ಸಂವಿಧಾನದ ಪರವಾಗಿರುವವರ ನಿಯಂತ್ರಣದಲ್ಲಿದ್ದರೆ ವಾಕ್ ಸ್ವಾತಂತ್ರ್ಯವನ್ನು ದುರಪಯೋಗಪಡಿಸಿ, ಸಮಾಜವನ್ನು ವಿಭಜಿಸುವವರ ಮೇಲೆ ಕ್ರಮ ತೆಗೆದುಕೊಳ್ಳಬಹುದು. ಇಲ್ಲವಾದರೆ, ಸಂವಿಧಾನದ ಪರವಾಗಿ, ಜನಪರವಾಗಿ, ಜಾತ್ಯತೀತತೆಯ ಪರವಾಗಿ ಮಾತನಾಡುವುದೇ ಅಪರಾಧವಾಗಿ ದ್ವೇಷ ಭಾಷಣ ಕಾಯ್ದೆಯನ್ನು ಜನಪರ ಹೋರಾಟಗಾರರ ವಿರುದ್ಧವೇ ಬಳಸಬಹುದು. ರಾಜ್ಯ ಜಾರಿಗೆ ತಂದಿರುವ ದ್ವೇಷ ಭಾಷಣ ವಿರೋಧಿ ಕಾಯ್ದೆ ಭವಿಷ್ಯದಲ್ಲಿ ದುರುಪಯೋಗವಾಗುವ ಎಲ್ಲ ಸಾಧ್ಯತೆಗಳು ಇವೆ ಎಂದು ಜನಪರ ಹೋರಾಟಗಾರರು, ಮಾಧ್ಯಮಗಳು ಆತಂಕ ಪಡುತ್ತಿರುವುದು ಈ ಕಾರಣಕ್ಕೆ. ಈ ಕಾರಣದಿಂದಲೇ 2026 ವಾಕ್ ಸ್ವಾತಂತ್ರ್ಯದ ಪಾಲಿಗೆ ಇನ್ನಷ್ಟು ದುರ್ಗಮ ವರ್ಷವಾಗಲಿದೆಯೇ ಎಂದು ಆತಂಕಪಡುವಂತಾಗಿದೆ.







