ಬೀದಿ ನಾಯಿಗಳ ದಾಳಿಯಲ್ಲಿ 10 ಜಿಂಕೆಗಳು ಸಾವು : ಹೊಸದಾಗಿ ಉದ್ಘಾಟಿಸಿದ್ದ ವನ್ಯಜೀವಿ ಧಾಮ ಮುಚ್ಚಿದ ಕೇರಳ ಸರಕಾರ
Photo Credit ; PTI
ತಿರುವನಂತಪುರಂ: ಇತ್ತೀಚೆಗೆ ಕೇರಳದ ತ್ರಿಶೂರ್‌ನಲ್ಲಿ ಉದ್ಘಾಟನೆಗೊಂಡಿದ್ದ ಪುತ್ತೂರು ವನ್ಯಜೀವಿಗಳ ಧಾಮದಲ್ಲಿ ಬೀದಿ ನಾಯಿಗಳ ದಾಳಿಗೆ 10 ಜಿಂಕೆಗಳ ಸಾವು ಸಂಭವಿಸಿದೆ. ಇದರ ಬೆನ್ನಲ್ಲೆ ವನ್ಯಜೀವಿಗಳ ಧಾಮವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ಬೀದಿ ನಾಯಿಗಳು ಜಿಂಕೆಗಳ ಮೇಲೆ ದಾಳಿ ನಡೆಸಿದ್ದರಿಂದ ವನ್ಯಜೀವಿ ಧಾಮದ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಅಕ್ಟೋಬರ್ 28ರಂದು ವನ್ಯಜೀವಿ ಧಾಮವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸಿದ್ದರು. ಇದಾದ ಕೇವಲ ಒಂದು ತಿಂಗಳಲ್ಲಿ ಈ ಘಟನೆ ಸಂಭವಿಸಿದೆ.
ಮೊದಲಿಗೆ ಪ್ರಾಣಿ ಆರೈಕೆ ಕೇಂದ್ರದ ಸಿಬ್ಬಂದಿಗಳು ಜಿಂಕೆಗಳ ಕಳೇಬರಗಳನ್ನು ಪತ್ತೆ ಹಚ್ಚಿದ್ದಾರೆ. ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದ ಮುಖ್ಯ ಅರಣ್ಯ ಪಶು ವೈದ್ಯಾಧಿಕಾರಿ ಡಾ.ಅರುಣ್ ಝಚಾರಿಯ, ನಾಯಿಗಳು ವನ್ಯಜೀವಿ ಧಾಮಕ್ಕೆ ನುಸುಳಿ ಜಿಂಕೆಗಳನ್ನು ಅಟ್ಟಿಸಿಕೊಂಡು ಹೋಗಿರುವುದರಿಂದ ಅವು ಗಾಬರಿಯಿಂದ ಕಣ್ಮುಚ್ಚಿಕೊಂಡು ಓಡಿ ತಡೆಗೋಡೆಗಳಿಗೆ ಢಿಕ್ಕಿ ಹೊಡೆದಿವೆ ಎಂದು ಹೇಳಿದ್ದಾರೆ.
ಘಟನೆ ಕುರಿತು ವಿಸ್ತೃತ ತನಿಖೆ ನಡೆಸಲು ಮುಖ್ಯ ವನ್ಯಜೀವಿ ವಾರ್ಡನ್, ಮುಖ್ಯ ಅರಣ್ಯ ಪಶು ವೈದ್ಯಾಧಿಕಾರಿ ಸೇರಿದಂತೆ ಮೂವರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯು ಈ ಬಗ್ಗೆ ನಾಲ್ಕು ದಿನಗಳಲ್ಲಿ ಪ್ರಾಥಮಿಕ ವರದಿ ಸಲ್ಲಿಸಲಿದೆ. ಎರಡು ವಾರಗಳಲ್ಲಿ ಅಂತಿಮ ವರದಿಯನ್ನು ಸಲ್ಲಿಸುವ ನಿರೀಕ್ಷೆಯಿದೆ.