Saudi Arabia | ಮದೀನಾದಲ್ಲಿ ಉಮ್ರಾ ಯಾತ್ರಿಕರಿದ್ದ ಬಸ್ ಅಪಘಾತದಲ್ಲಿ ಮೂರು ತಲೆಮಾರಿನ ಒಂದೇ ಕುಟುಂಬದ 18 ಮಂದಿ ಮೃತ್ಯು!
ಶನಿವಾರ ಹೈದರಾಬಾದ್ ಗೆ ಮರಳಲಿದ್ದ ಕುಟುಂಬ
Photo Credit : NDTV
ಹೈದರಾಬಾದ್: ಸೌದಿ ಅರೇಬಿಯದ ಮದೀನಾ ಬಳಿ ನಡೆದ ಬಸ್ ಅಪಘಾತದಲ್ಲಿ ಒಂಭತ್ತು ಮಕ್ಕಳು ಸೇರಿದಂತೆ ಮೂರು ತಲೆಮಾರಿನ ಒಂದೇ ಕುಟುಂಬದ 18 ಮಂದಿ ಭಾರತೀಯ ಯಾತ್ರಾರ್ಥಿಗಳು ಮೃತಪಟ್ಟಿದ್ದಾರೆ. ಹೈದರಾಬಾದ್ ಮೂಲದ ಈ ಕುಟುಂಬ ಶನಿವಾರ ತವರಿಗೆ ಮರಳಬೇಕಿತ್ತು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಮುಹಮ್ಮದ್ ಆಸಿಫ್, “ನನ್ನ ನಾದಿನಿ, ನನ್ನ ಮೈದುನ, ಅವರ ಮಕ್ಕಳು, ಮೂವರು ಪುತ್ರಿಯರು ಹಾಗೂ ಅವರ ಮಕ್ಕಳು ಉಮ್ರಾಗಾಗಿ ಮದೀನಾಕ್ಕೆ ತೆರಳಿದ್ದರು. ಎಂಟು ದಿನಗಳ ಹಿಂದೆ ಅವರು ಮದೀನಾಕ್ಕೆ ತೆರಳಿದ್ದರು ಹಾಗೂ ಉಮ್ರಾ ವಿಧಿ ವಿಧಾನ ನಂತರ, ಮದೀನಾಕ್ಕೆ ಹಿಂದಿರುಗುತ್ತಿದ್ದರು. ಮುಂಜಾನೆ ಸುಮಾರು 1.30 ಗಂಟೆಗೆ ಬಸ್ ಅಪಘಾತ ಸಂಭವಿಸಿದ್ದು, ಬಸ್ ಗೆ ಬೆಂಕಿ ಹೊತ್ತುಕೊಂಡಿದೆ” ಎಂದು ತಿಳಿಸಿದ್ದಾರೆ.
“ಅಪಘಾತ ಸಂಭವಿಸುವುದಕ್ಕೂ ಮುನ್ನ ಅವರು ತಮ್ಮ ಸಂಬಂಧಿಕರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದರು. ಈ ಅಪಘಾತದಲ್ಲಿ ಒಂದೇ ಕುಟುಂಬದ ಒಂಭತ್ತು ಮಂದಿ ವಯಸ್ಕರು ಹಾಗೂ ಒಂಭತ್ತು ಮಕ್ಕಳು ಮೃತಪಟ್ಟಿದ್ದಾರೆ. ಇದೊಂದು ಭಯಾನಕ ದುರಂತ”, ಎಂದು ಅವರು ಭಾವುಕರಾದರು.
ಅಪಘಾತದಲ್ಲಿ ಮೃತಪಟ್ಟ ತಮ್ಮ ಸಂಬಂಧಿಕರ ಪೈಕಿ, ನಸೀರುದ್ದೀನ್ (70), ಅವರ ಪತ್ನಿ ಅಖ್ತರ್ ಬೇಗಂ (62), ಪುತ್ರ ಸಲೌದ್ದೀನ್ (42), ಪುತ್ರಿಯರಾದ ಅಮೀನಾ (44), ರಿಝ್ವಾನಾ (38) ಹಾಗೂ ಶಬಾನಾ (40) ಮತ್ತು ಅವರ ಮಕ್ಕಳು ಎಂದು ಮುಹಮ್ಮದ್ ಆಸಿಫ್ ಗುರುತಿಸಿದ್ದಾರೆ.