×
Ad

1993ರ ವಿಮಾನ ಅಪಹರಣ ಪ್ರಕರಣ | ಅಪರಾಧಿಗೆ ಅವಧಿಪೂರ್ವ ಬಿಡುಗಡೆ ನಿರಾಕರಿಸಿದ್ದ ಎಸ್‌ಆರ್‌ಬಿ ನಿರ್ಧಾರ ತಳ್ಳಿಹಾಕಿದ ದಿಲ್ಲಿ ಹೈಕೋರ್ಟ್

Update: 2025-07-26 20:43 IST

ದಿಲ್ಲಿ ಹೈಕೋರ್ಟ್

ಹೊಸದಿಲ್ಲಿ, ಜು.26: 1993, ಮಾ.27ರಂದು ದಿಲ್ಲಿಯಿಂದ ಚೆನ್ನೈಗೆ ಪ್ರಯಾಣಿಸುತ್ತಿದ್ದ ಇಂಡಿಯನ್ ಏರ್‌ಲೈನ್ಸ್‌ನ ವಿಮಾನವನ್ನು ಅಪಹರಿಸಿದ್ದಕ್ಕಾಗಿ ಶಿಕ್ಷೆಗೊಳಗಾಗಿರುವ ವ್ಯಕ್ತಿಗೆ ಅವಧಿಗೆ ಮುನ್ನ ಬಿಡುಗಡೆಯನ್ನು ನಿರಾಕರಿಸಿದ ಶಿಕ್ಷೆ ಪುನರ್‌ಪರಿಶೀಲನಾ ಮಂಡಳಿ (ಎಸ್‌ಆರ್‌ಬಿ)ಯ ನಿರ್ಧಾರವನ್ನು ದಿಲ್ಲಿ ಉಚ್ಚ ನ್ಯಾಯಾಲಯವು ತಳ್ಳಿ ಹಾಕಿದೆ.

ವಿಷಯವನ್ನು ಹೊಸದಾಗಿ ಪರಿಗಣಿಸುವಂತೆ ಎಸ್‌ಆರ್‌ಬಿಗೆ ಮರಳಿಸಿದ ನ್ಯಾ.ಸಂಜೀವ ನರುಲಾ ಅವರು,ಜೈಲಿನಲ್ಲಿ ಅಪರಾಧಿಯ ನಡವಳಿಕೆಯು ಸುಧಾರಣೆಯ ಲಕ್ಷಣಗಳನ್ನು ಸೂಚಿಸುತ್ತಿದೆ ಎಂದು ಹೇಳಿದರು.

ಅರ್ಜಿದಾರ ಪ್ರಶ್ನಿಸಿರುವ ಎಸ್‌ಆರ್‌ಬಿಯ ನಿರ್ಧಾರವು ಸಮರ್ಥನೀಯ ಕಾರಣಗಳನ್ನು ಹೊಂದಿಲ್ಲ ಮತ್ತು ಅರ್ಜಿದಾರನ ನಡವಳಿಕೆ ಹಾಗೂ ಸುಧಾರಣೆಗೆ ಸಂಬಂಧಿಸಿದಂತೆ ನ್ಯಾಯಾಂಗ ಅವಲೋಕನಗಳು ಸೇರಿದಂತೆ ಸಂಬಂಧಿತ ಅಂಶಗಳನ್ನು ಪರಿಗಣಿಸಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಹೀಗಾಗಿ ಈ ನಿರ್ಧಾರವನ್ನು ಎತ್ತಿ ಹಿಡಿಯಲು ಸಾಧ್ಯವಿಲ್ಲ ಎಂದು ಉಚ್ಚ ನ್ಯಾಯಾಲಯವು ತನ್ನ ಜು.7ರ ತೀರ್ಪಿನಲ್ಲಿ ತಿಳಿಸಿದೆ.

ವಿಮಾನ ಅಪಹರಣ ಪ್ರಕರಣದಲ್ಲಿ ಅಪರಾಧಿ ಹರಿ ಸಿಂಗ್‌ ಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದೆ.

ಬಾಬ್ರಿ ಮಸೀದಿ ಧ್ವಂಸ ಮತ್ತು ನಂತರ ದೇಶವನ್ನು ಆವರಿಸಿದ್ದ ಕೋಮು ಹಿಂಸಾಚಾರದ ದಳ್ಳುರಿಯನ್ನು ವಿರೋಧಿಸಿ ಸಿಂಗ್ ವಿಮಾನವನ್ನು ಅಪಹರಿಸಿದ್ದ ಎನ್ನಲಾಗಿದೆ.

2001ರಲ್ಲಿ ವಿಚಾರಣಾ ನ್ಯಾಯಾಲಯವು ಸಿಂಗ್ ದೋಷಿ ಎಂದು ಘೋಷಿಸಿತ್ತು. 2011ರಲ್ಲಿ ಉಚ್ಚ ನ್ಯಾಯಾಲಯವು ಆತನ ಮೇಲ್ಮನವಿಯನ್ನು ತಿರಸ್ಕರಿಸಿತ್ತು ಮತ್ತು ಸರ್ವೋಚ್ಚ ನ್ಯಾಯಾಲಯದಲ್ಲಿ ವಿಶೇಷ ರಜಾ ಅರ್ಜಿಯನ್ನು ಹಿಂದೆಗೆದುಕೊಳ್ಳಲಾಗಿತ್ತು.

ಎಸ್‌ಆರ್‌ಬಿ ಅವಧಿಪೂರ್ವ ಬಿಡುಗಡೆಗಾಗಿ ತನ್ನ ಹೆಸರನ್ನು ನಿಯತಕಾಲಿಕವಾಗಿ ಪರಿಶೀಲಿಸುತ್ತಿತ್ತು,ಆದರೆ ಅಪರಾಧವು ಗಂಭೀರವಾಗಿದೆ ಎಂಬ ಕಾರಣದಿಂದ ನಿರಂತರವಾಗಿ ತಿರಸ್ಕರಿಸುತ್ತಿತ್ತು ಎಂದು ಸಿಂಗ್ ವಾದಿಸಿದ್ದ.

ಜೈಲಿನಲ್ಲಿ ಅರ್ಜಿದಾರನ ನಡವಳಿಕೆಯು ಸುಧಾರಣೆಯ ಲಕ್ಷಣಗಳನ್ನು ಸೂಚಿಸುತ್ತಿದೆ. ದೀರ್ಘಾವಧಿಯ ಜೈಲುವಾಸದ ಬಳಿಕವೂ ಅರ್ಜಿದಾರನು ಈಗಲೂ ಅಪರಾಧ ಪ್ರವೃತ್ತಿಯನ್ನು ಹೊಂದಿದ್ದಾನೆ ಎಂದು ಸೂಚಿಸುವ ಯಾವುದೇ ಅಹಿತಕರ ಘಟನೆಯ ದಾಖಲೆಯಿಲ್ಲ ಎಂದು ಉಚ್ಚ ನ್ಯಾಯಾಲಯವು ಹೇಳಿದೆ.

ಈ ವರ್ಷದ ಎಪ್ರಿಲ್ 24ರ ಎಸ್‌ಆರ್‌ಬಿ ಸಭೆಯ ಇತ್ತೀಚಿನ ನಡಾವಳಿಗಳನ್ನು ತಳ್ಳಿ ಹಾಕಿದ ಉಚ್ಚ ನ್ಯಾಯಾಲಯವು, ಪ್ರಕರಣವನ್ನು ಮರುಪರಿಶೀಲಿಸುವಂತೆ ಮತ್ತು ಎಂಟು ವಾರಗಳಲ್ಲಿ ನಿರ್ಧರಿಸುವಂತೆ ಅದಕ್ಕೆ ಸೂಚಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News