ಗುಜರಾತ್‌ನ ಏಕತಾ ಪ್ರತಿಮೆ ಜಂಗಲ್ ಸಫಾರಿಯಲ್ಲಿ 2 ವರ್ಷಗಳ ಅವಧಿಯಲ್ಲಿ 38 ಅಪರೂಪದ ಪ್ರಾಣಿ, ಪಕ್ಷಿಗಳ ಸಾವು
ಜಂಗಲ್ ಸಫಾರಿ | Photo: trawell.in
ಅಹ್ಮದಾಬಾದ್: ಇಲ್ಲಿನ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಏಕತೆಯ ಪ್ರತಿಮೆ ಕಾಂಪ್ಲೆಕ್ಸ್‌ನಲ್ಲಿರುವ ಸರ್ದಾರ್ ಪಟೇಲ್ ಝೂಲಾಜಿಕಲ್ ಪಾರ್ಕ್ (ಜಂಗಲ್ ಸಫಾರಿ) ನಲ್ಲಿ ವಿವಿಧ ರಾಜ್ಯಗಳು ಮತ್ತು ವಿದೇಶಗಳಿಂದ ತರಿಸಲಾದ 38 ಪ್ರಾಣಿ ಪಕ್ಷಿಗಳು ಎರಡು ವರ್ಷಗಳ ಅವಧಿಯಲ್ಲಿ ಸಾವನ್ನಪ್ಪಿವೆ ಎಂದು newindianexpress.com ವರದಿ ಮಾಡಿದೆ.
ಲುನಾವಾಡ ಕಾಂಗ್ರೆಸ್ ಶಾಸಕ ಗುಲಾಬ್ ಸಿಂಗ್ ಚೌಹಾಣ್ ಅವರು ಕೇಳಿದ ಪ್ರಶ್ನೆಗೆ ವಿಧಾನಸಭೆಯಲ್ಲಿ ಉತ್ತರ ನೀಡಿದ ರಾಜ್ಯ ಸರ್ಕಾರ ಡಿಸೆಂಬರ್ 31, 2023ರಲ್ಲಿದ್ದಂತೆ ವಿವಿಧ ರಾಜ್ಯಗಳು ಮತ್ತು ವಿದೇಶಗಳಿಂದ ಕಳೆದೆರಡು ವರ್ಷಗಳ ಅವಧಿಯಲ್ಲಿ ಇಲ್ಲಿಗೆ ತರಿಸಲಾಗಿದ್ದ 295 ಪ್ರಾಣಿಗಳು ಮತ್ತು ಪಕ್ಷಿಗಳ ಪೈಕಿ 38 ಸಾವನ್ನಪ್ಪಿವೆ.
ಪ್ರಶ್ನೆಗೆ ಉತ್ತರಿಸಿದ ಗುಜರಾತ್ ಸಿಎಂ ಭೂಪೇಂದ್ರ ಪಟೇಲ್, ಐದು ಅಲ್ಪಕಾಗಳ ಪೈಕಿ ಮೂರು ಸತ್ತಿವೆ, ನಾಲ್ಕು ವಾಲ್ಲಬೈಸ್ ಪೈಕಿ ಒಂದು ಸತ್ತಿವೆ, ನಾಲ್ಕು ಸನ್ ಕೊನ್ಯೂರ್‌ಗಳು, ಮೂರು ಗ್ರೀನ್-ಚೀಕ್ಡ್ ಕೊನ್ಯೂರ್‌ಗಳು, ಏಳು ಬ್ಲೂ ಫೆಸೆಂಟ್ ಗಳು ಹಾಗೂ ಮೂರು ಸಿಲ್ವರ್ ಫೆಸೆಂಟ್‌ಗಳು, ಮೂರು ರೆಡ್-ಬಿಲ್ಡ್ ಟೌಕನ್‌ಗಳು, ಮೂರು ಥಿಯಾಮಿನ್ ಜಿಂಕೆಗಳು ಹಾಗೂ ಮೂರು ಸ್ಕ್ವಿರಿಲ್ ಕೋತಿಗಳು ಹಾಗೂ ಒಂದು ಮಾರ್ಷ್ ಮೊಸಳೆ ಸಾವನ್ನಪ್ಪಿವೆ.
ಅಪರೂಪದ ಪ್ರಾಣಿ ಪಕ್ಷಿಗಳಿಗಾಗಿ ಸಫಾರಿಯಲ್ಲಿ ರೂ 34 ಲಕ್ಷಕ್ಕೂ ಹೆಚ್ಚು ವ್ಯಯಿಸಲಾಗಿತ್ತು.
ಗುಜರಾತ್ ಸರ್ಕಾರ ಮಾರ್ಚ್ 2023 ರಲ್ಲಿ ನೀಡಿದ ಮಾಹಿತಿಯಂತೆ 12 ಅಪರೂಪದ ಪ್ರಾಣಿಗಳು ಹಾಗೂ ಪಕ್ಷಿಗಳು ಫೆಬ್ರವರಿ 1, 2021 ಹಾಗೂ ಜನವರಿ 31, 2023 ನಡುವೆ ಸಾವನ್ನಪ್ಪಿದ್ದವು. ಈ ಎರಡು ವರ್ಷಗಳಲ್ಲಿ ಸಫಾರಿಯಲ್ಲಿ ಒಟ್ಟು 940 ಪ್ರಾಣಿಗಳು ಮತ್ತು ಪಕ್ಷಿಗಳಿದ್ದವು.
ಶ್ವಾಸಕೋಶ ಸ್ತಂಭನ ಮತ್ತು ಹೃದಯ ಸ್ತಂಭನ ಈ ಸಾವುಗಳಿಗೆ ಕಾರಣ ಎಂದು ಮಾರ್ಚ್ 2023ರಲ್ಲಿ ಸರ್ಕಾರ ಹೇಳಿದ್ದರೆ ಮಂಗಳವಾರದ ಹೇಳಿಕೆಯಲ್ಲಿ ಯಾವುದೇ ಮಾಹಿತಿ ನೀಡಲಾಗಿಲ್ಲ.