ಟ್ರಕ್ ಗೆ ಢಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಸಿಎನ್‍ಜಿ ಕಾರು: ಐವರು ಮೃತ್ಯು
ಸಾಂದರ್ಭಿಕ ಚಿತ್ರ
ಜಲಂಧರ್: ಸಿಎನ್‍ಜಿ ಕಾರೊಂದು ಟ್ರಕ್ ಗೆ ಢಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡು, ಐವರು ಸುಟ್ಟು ಕರಕಲಾಗಿರುವ ಘಟನೆ ಶುಕ್ರವಾರ ರಾತ್ರಿ ಉಂಚಿ ಬಸ್ಸಿ ಬಳಿಯ ಜಲಂಧರ್-ಪಠಾಣ್ ಕೋಟ್ ರಸ್ತೆಯಲ್ಲಿ ನಡೆದಿದೆ ಎಂದು hindustantimes.com ವರದಿ ಮಾಡಿದೆ.
ಮೃತಪಟ್ಟವರು ಜಲಂಧರ್ ನಿವಾಸಿಗಳಾಗಿದ್ದು, ಘಟನೆ ಸಂದರ್ಭ ಪಠಾಣ್ ಕೋಟ್ ನಿಂದ ತಮ್ಮ ನಿವಾಸಕ್ಕೆ ಮರಳುತ್ತಿದ್ದರು ಎಂದು ಹೇಳಲಾಗಿದೆ. ಈ ಅಪಘಾತದಲ್ಲಿ ಟ್ರಕ್ ಡ್ರೈವರ್ ಕೂಡಾ ಗಾಯಗೊಂಡಿದ್ದು, ಆತನನ್ನು ದಸುಯ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ವೇಗವಾಗಿ ಚಲಿಸುತ್ತಿದ್ದ ಸಿಎನ್‍ಜಿ ಚಾಲಿತ ಕಾರು ಮೊದಲಿಗೆ ಗುರುತು ಪತ್ತೆಯಾಗದ ವಾಹನವೊಂದಕ್ಕೆ ಢಿಕ್ಕಿ ಹೊಡೆದ ನಂತರ ಟ್ರಕ್ ಗೆ ಅಪ್ಪಳಿಸಿತು ಎಂದು ಹೇಳಲಾಗಿದೆ. ಈ ಢಿಕ್ಕಿಯ ಕಾರಣಕ್ಕೆ, ಕಾರಿನ ಸಿಎನ್‍ಜಿ ಸಿಲಿಂಡರ್ ಬೆಂಕಿಯ ಜ್ವಾಲೆಯಾಗಿ ಸ್ಫೋಟಗೊಂಡಿದೆ. ಈ ಸಂದರ್ಭದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಐವರ ಪೈಕಿ ನಾಲ್ವರು ಸ್ಥಳದಲ್ಲೇ ಮೃತಪಟ್ಟರೆ, ತೀವ್ರವಾಗಿ ಗಾಯಗೊಂಡಿದ್ದ ಮತ್ತೊಬ್ಬ ಪ್ರಯಾಣಿಕ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಈ ಘಟನೆಯ ಕುರಿತು ಯಾವುದೇ ಪ್ರಕರಣ ದಾಖಲಿಸಿಕೊಂಡಿರದಿದ್ದರೂ, ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ದಸುಯ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್ ಪೆಕ್ಟರ್ ಸರಬ್ಜಿತ್ ಸಿಂಗ್ ತಿಳಿಸಿದ್ದಾರೆ.