×
Ad

ಆಂಧ್ರಪ್ರದೇಶದ ಪಟಾಕಿ ಘಟಕದಲ್ಲಿ ಅಗ್ನಿ ಅವಘಡ: ಆರು ಮಂದಿ ಮೃತ್ಯು, ಇಬ್ಬರು ಗಂಭೀರ

Update: 2025-10-08 15:32 IST

Photo credit: NDTV

ರಾಯವರಂ (ಆಂಧ್ರಪ್ರದೇಶ): ಡಾ. ಬಿ.ಆರ್. ಅಂಬೇಡ್ಕರ್ ಕೊನಸೀಮಾ ಜಿಲ್ಲೆಯ ರಾಯವರಂ ಸಮೀಪದ ಪಟಾಕಿ ತಯಾರಿಕಾ ಘಟಕದಲ್ಲಿ ಬುಧವಾರ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಆರು ಮಂದಿ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಘಟಕದಲ್ಲಿ ಅಸಮರ್ಪಕ ಸುರಕ್ಷತಾ ಕ್ರಮಗಳು ಮತ್ತು ನಿರ್ವಹಣಾ ಲೋಪದಿಂದಲೇ ಬೆಂಕಿ ಅವಘಡ ಸಂಭವಿಸಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಮೀನಾ ಅವರು, “ಘಟಕವು ಪರವಾನಗಿ ಪಡೆದ ಪಟಾಕಿ ತಯಾರಿಕಾ ಘಟಕವಾಗಿದೆ. ಘಟನಾ ಸ್ಥಳದಿಂದ ಆರು ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಮೃತರ ಗುರುತಿನ ಪರಿಶೀಲನೆ ನಡೆಯುತ್ತಿದೆ,” ಎಂದು ಪಿಟಿಐಗೆ ತಿಳಿಸಿದ್ದಾರೆ.

ಗಾಯಗೊಂಡ ಇಬ್ಬರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ಅಗ್ನಿಶಾಮಕ ದಳ ಸ್ಥಳಕ್ಕೆ ತಲುಪಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿ ಘಟನೆಯ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಪ್ರಾರಂಭಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News