×
Ad

ಕಿರುಕುಳ ವಿರೋಧಿಸಿದ ಬಾಲಕಿಯ ಗುಂಡಿಕ್ಕಿ ಹತ್ಯೆಗೈದ ಯುವಕ

Update: 2023-08-30 20:52 IST

ಸಾಂದರ್ಭಿಕ ಚಿತ್ರ

ಅಮೃತಸರ: ಯುವಕನೋರ್ವ ಕಳೆದ ಕೆಲವು ತಿಂಗಳಿಂದ ತಾನು ಹಿಂಬಾಲಿಸುತ್ತಿದ್ದ ಬಾಲಕಿಯನ್ನು ಗುಂಡು ಹಾರಿಸಿ ಹತ್ಯೆಗೈದ ಘಟನೆ ಪಂಜಾಬ್ನ ಅಜ್ನಾಲಾ ಗ್ರಾಮದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಧಾನ ಆರೋಪಿ ದಲ್ಬೀರ್ ಸಿಂಗ್ ಜೊತೆಗಿದ್ದ ಇಬ್ಬರು ಸಹವರ್ತಿಗಳಲ್ಲಿ ಓರ್ವನನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮೂವರು ಆರೋಪಿಗಳು ಮಂಗಳವಾರ ಸಂಜೆ ಬಾಲಕಿಯ ಚಿಕ್ಕಮ್ಮನ ಮನೆಗೆ ಪ್ರವೇಶಿಸಿ ಆಕೆ ಎಲ್ಲಿದ್ದಾಳೆ ಎಂದು ಪ್ರಶ್ನಿಸಿದ್ದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಈ ಸಂದರ್ಭ ಮನೆಯ ಒಳಗಿದ್ದ ಬಾಲಕಿ ಹೊರ ಬಂದಳು. ಅವರ ನಡುವೆ ವಾಗ್ವಾದ ನಡೆಯಿತು.

ದಲ್ಬೀರ್ ಸಿಂಗ್ ಆಕೆಯ ಮೇಲೆ ಗುಂಡು ಹಾರಿಸಿ ಪರಾರಿಯಾದ. ಬಾಲಕಿಯನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ, ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದರು ಎಂದು ಅವರು ತಿಳಿಸಿದ್ದಾರೆ. ಆರೋಪಿ ಕಳೆದ ಕೆಲವು ತಿಂಗಳಿಂದ ಬಾಲಕಿಯನ್ನು ಹಿಂಬಾಲಿಸಿ ಕಿರುಕುಳ ನೀಡುತ್ತಿದ್ದ ಹಾಗೂ ವಿವಾಹವಾಗುವಂತೆ ಬಲವಂತಪಡಿಸುತ್ತಿದ್ದ.

ಯುವಕ ನಿರಂತರ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಆಕೆಯ ಹೆತ್ತವರು ಬಾಲಕಿಯನ್ನು ಚಿಕ್ಕಮ್ಮನ ಮನೆಗೆ ಕಳುಹಿಸಿದ್ದರು. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಹಾಗೂ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಹಾಗೂ ಇತರ ಇಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News