ಜಾರ್ಖಂಡ್ | ಶಿಶುಗಳಿಗೆ ಹುಟ್ಟಿದ ದಿನವೇ ಆಧಾರ್, ಜನನ ಪ್ರಮಾಣ ಪತ್ರ !
ಸಾಂದರ್ಭಿಕ ಚಿತ್ರ | Photo Credit : freepik.com
ಜೆಮ್‌ಶೆಡ್‌ಪುರ, ನ. 2: ತನ್ನ ಸೌಲಭ್ಯದಲ್ಲಿ ಜನಿಸಿದ ಶಿಶುಗಳಿಗೆ ಅದೇ ದಿನ ಆಧಾರ್ ನೋಂದಣಿ ಮಾಡಲಾಗಿದೆ ಹಾಗೂ ಜನನ ಪ್ರಮಾಣ ಪತ್ರಗಳನ್ನು ನೀಡಲಾಗಿದೆ ಎಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ಚಕ್ರಧರಪುರ ವಿಭಾಗೀಯ ರೈಲ್ವೆ ಆಸ್ಪತ್ರೆ ತಿಳಿಸಿದೆ.
ಶನಿವಾರ ಜನಿಸಿದ ನಾಲ್ಕು ಶಿಶುಗಳಿಗೆ ಅದೇ ದಿನ ಆಧಾರ್ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ ಹಾಗೂ ಜನನ ಪ್ರಮಾಣ ಪತ್ರ ನೀಡಲಾಗಿದೆ ಎಂದು ಅದು ತಿಳಿಸಿದೆ.
‘‘ಇದು ದಕ್ಷಿಣ ಈಶಾನ್ಯ ರೈಲ್ವೆ (ಎಸ್‌ಇಆರ್) ವ್ಯಾಪ್ತಿಯಲ್ಲಿ ಬರುವ ರೈಲ್ವೆ ಆಸ್ಪತ್ರೆಗಳಲ್ಲಿ ಶಿಶುಗಳು ಜನಿಸಿದ ದಿನವೇ ಆಧಾರ್ ನೋಂದಣಿ ಮಾಡಿದ ಹಾಗೂ ಜನನ ಪ್ರಮಾಣ ಪತ್ರ ನೀಡಿದ ಮೊದಲ ನಿದರ್ಶನವಾಗಿದೆ’’ ಎಂದು ಆಸ್ಪತ್ರೆಯ ಹೇಳಿಕೆ ತಿಳಿಸಿದೆ.
ಚಕ್ರಧರಪುರ ವಿಭಾಗೀಯ ರೈಲ್ವೆ ಮ್ಯಾನೇಜರ್ ಹಾಗೂ ಸಿಬ್ಬಂದಿ ನಿರ್ವಹಣಾ ವ್ಯವಸ್ಥೆ, ಜಿಲ್ಲಾಡಳಿತ, ಅಂಚೆ ಹಾಗೂ ಆಧಾರ್ ಇಲಾಖೆಗಳ ಸಮನ್ವಯ ಪ್ರಯತ್ನಗಳ ಮೂಲಕ ಇದು ಸಾಧ್ಯವಾಗಿದೆ ಎಂದು ದಕ್ಷಿಣ ಈಶಾನ್ಯ ರೈಲ್ವೆ ಹೇಳಿಕೆಯಲ್ಲಿ ತಿಳಿಸಿದೆ.
ಮುಂದಿನ ದಿನಗಳಲ್ಲಿ ಈ ಇಲಾಖೆಗಳ ಅಧಿಕಾರಿಗಳು ಚಕ್ರಧರಪುರ ರೈಲ್ವೆ ಆಸ್ಪತ್ರೆಗೆ ನಿಯಮಿತವಾಗಿ ಭೇಟಿ ನೀಡಿ ನವಜಾತ ಶಿಶುಗಳಿಗೆ ಆಧಾರ್ ಕಾರ್ಡ್‌ಗಳನ್ನು ವಿತರಿಸಲು ಅನುಕೂಲ ಮಾಡಿ ಕೊಡಲಿದ್ದಾರೆ ಎಂದು ಹೇಳಿಕೆ ತಿಳಿಸಿದೆ.