×
Ad

ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆಯ ಫಲಶ್ರುತಿ | ಪಶ್ಚಿಮ ಬಂಗಾಳದಲ್ಲಿ ನರೇಗಾ ಪುನರಾರಂಭಕ್ಕೆ ಚಿಂತನೆ: ಪಿಎಂಒಗೆ ತಿಳಿಸಿದ ಎಂಒಆರ್‌ಡಿ

Update: 2025-11-05 18:31 IST

Photo Credit : indianexpress

ಹೊಸದಿಲ್ಲಿ,ನ.5: ಇತ್ತೀಚಿಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಹಿನ್ನಡೆಯನ್ನು ಅನುಭವಿಸಿದ ಬಳಿಕ ಗ್ರಾಮೀಣಾಭಿವೃದ್ಧಿ ಸಚಿವಾಲಯವು(ಎಂಒಆರ್‌ಡಿ) ಪಶ್ಚಿಮ ಬಂಗಾಳದಲ್ಲಿ ‘ವಿಶೇಷ ಷರತ್ತುಗಳಡಿ’ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ(ನರೇಗಾ) ಪುನರಾರಂಭದ ಬಗ್ಗೆ ಪರಿಶೀಲಿಸಲು ನಿರ್ಧರಿಸಿದೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.

ಪಶ್ಚಿಮ ಬಂಗಾಳದಲ್ಲಿ ಮೂರು ವರ್ಷಗಳ ಹಿಂದೆಯೇ ನರೇಗಾ ಯೋಜನೆಯ ಅನುಷ್ಠಾನವನ್ನು ಸ್ಥಗಿತಗೊಳಿಸಲಾಗಿತ್ತು ಮತ್ತು ಯೋಜನೆಯನ್ನು ಪುನರಾರಂಭಿಸುವಂತೆ ರಾಜ್ಯದ ಟಿಎಂಸಿ ನೇತೃತ್ವದ ಸರಕಾರವು ಸಚಿವಾಲಯವನ್ನು ಒತ್ತಾಯಿಸುತ್ತಿತ್ತು.

ಪಶ್ಚಿಮ ಬಂಗಾಳದಲ್ಲಿ ‘ವಿಶೇಷ ಷರತ್ತುಗಳಡಿ’ ನರೇಗಾ ಯೋಜನೆಯ ಪುನರಾರಂಭದ ಬಗ್ಗೆ ತಾನು ಪರಿಶೀಲಿಸಬಹುದು ಎಂದು ಸಚಿವಾಲಯವು ಕಳೆದ ವಾರ ಪ್ರಧಾನಿ ಕಚೇರಿಗೆ(ಪಿಎಂಒ) ತಿಳಿಸಿದೆ ಎನ್ನಲಾಗಿದೆ. ಪಿಎಂಒ ಈ ವಿಷಯದ ಬಗ್ಗೆ ಸಚಿವಾಲಯದಿಂದ ವರದಿಯನ್ನು ಕೇಳಿತ್ತು.

ಆ.1,2025ರಿಂದ ಪಶ್ಚಿಮ ಬಂಗಾಳದಲ್ಲಿ ನರೇಗಾ ಯೋಜನೆಯನ್ನು ಜಾರಿಗೊಳಿಸುವಂತೆ ನಿರ್ದೇಶಿಸಿದ್ದ ಕಲಕತ್ತಾ ಉಚ್ಚ ನ್ಯಾಯಾಲಯದ ಜೂ.18ರ ಆದೇಶವನ್ನು ಪ್ರಶ್ನಿಸಿ ಕೇಂದ್ರವು ಸಲ್ಲಿಸಿದ್ದ ವಿಶೇಷ ರಜಾ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ಅ.27ರಂದು ವಜಾಗೊಳಿಸಿತ್ತು. ಉಚ್ಚ ನ್ಯಾಯಾಲಯವು ರಾಜ್ಯದಲ್ಲಿ ಯೋಜನೆಯ ಜಾರಿಗಾಗಿ ವಿಶೇಷ ಷರತ್ತುಗಳನ್ನು ವಿಧಿಸುವುದನ್ನು ಕೇಂದ್ರಕ್ಕೆ ಬಿಟ್ಟಿತ್ತು.

ಕೇಂದ್ರ ಸರಕಾರದ ನಿರ್ದೇಶನಗಳನ್ನು ಪಾಲಿಸದ ಕಾರಣ ನರೇಗಾ ಕಾಯ್ದೆಯ ಕಲಂ 27ನ್ನು ಉಲ್ಲೇಖಿಸಿ ಕೇಂದ್ರವು ಪಶ್ಚಿಮ ಬಂಗಾಳಕ್ಕೆ ಹಣ ಬಿಡುಗಡೆಯನ್ನು ಮಾ.9,2022ರಿಂದ ನಿಲ್ಲಿಸಿತ್ತು. ಆಗಿನಿಂದ ನರೇಗಾ ಯೋಜನೆಯಡಿ ರಾಜ್ಯದಲ್ಲಿ ಯಾವುದೇ ಕಾಮಗಾರಿ ನಡೆದಿಲ್ಲ. ಯೋಜನೆಯು ಸ್ಥಗಿತಗೊಳ್ಳುವ ಮುನ್ನ ರಾಜ್ಯದಲ್ಲಿಯ 51ಲಕ್ಷದಿಂದ 80 ಲಕ್ಷವರೆಗೆ ಕುಟುಂಬಗಳು 2014-15 ಮತ್ತು 2021-22ರ ನಡುವೆ ವಾರ್ಷಿಕವಾಗಿ ಯೋಜನೆಯ ಲಾಭವನ್ನು ಪಡೆದುಕೊಳ್ಳುತ್ತಿದ್ದವು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News