ಅಹಮದಾಬಾದ್ ವಿಮಾನ ಅಪಘಾತ: 190 ಮಂದಿಯ ಗುರುತು ಪತ್ತೆ; 159 ಮೃತದೇಹಗಳು ಕುಟುಂಬಸ್ಥರಿಗೆ ಹಸ್ತಾಂತರ
PC : PTI
ಅಹಮದಾಬಾದ್: ಜೂನ್ 12ರಂದು ನಡೆದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದ ಕನಿಷ್ಠ 190 ಮಂದಿಯ ಗುರುತನ್ನು ಡಿಎನ್ಎ ಹೋಲಿಕೆ ಮೂಲಕ ಪತ್ತೆ ಹಚ್ಚಲಾಗಿದ್ದು, ಈ ಪೈಕಿ 159 ಮೃತದೇಹಗಳನ್ನು ಸಂಬಂಧಿತ ಕುಟುಂಬಗಳ ಸದಸ್ಯರಿಗೆ ಹಸ್ತಾಂತರಿಸಲಾಗಿದೆ ಎಂದು ಬುಧವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
242 ಮಂದಿ ಪ್ರಯಾಣಿಕರು ಹಾಗೂ ವಿಮಾನ ಸಿಬ್ಬಂದಿಗಳನ್ನು ಹೊತ್ತು ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಸಂಖ್ಯೆ AI171, ಜೂನ್ 12ರಂದು ಅಹಮದಾಬಾದ್‌ನಲ್ಲಿ ಅಪಘಾತಕ್ಕೀಡಾಗಿತ್ತು. ಈ ಅಪಘಾತದಲ್ಲಿ ಓರ್ವ ಪ್ರಯಾಣಿಕನನ್ನು ಹೊರತುಪಡಿಸಿ, ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಹಾಗೂ ಸಮೀಪದ ವೈದ್ಯಕೀಯ ಸಂಕೀರ್ಣವೊಂದರಲ್ಲಿದ್ದ ಸುಮಾರು 29 ಮಂದಿ ಮೃತಪಟ್ಟಿದ್ದರು.
ಈ ಅಪಘಾತದಲ್ಲಿ ಗುರುತು ಸಿಗಲಾರದಷ್ಟು ಅಥವಾ ತೀವ್ರ ಹಾನಿಗೀಡಾಗಿ ಸುಟ್ಟು ಕರಕಲಾಗಿರುವ ಮೃತದೇಹಗಳ ಗುರುತುಗಳನ್ನು ಪತ್ತೆ ಹಚ್ಚಲು ಅಧಿಕಾರಿಗಳು ಡಿಎನ್ಎ ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಅಹಮದಾಬಾದ್ ಸಾರ್ವಜನಿಕ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಕೇಶ್, "ಬುಧವಾರ ಬೆಳಗಿನವರೆಗೆ 190 ಮೃತದೇಹಗಳ ಡಿಎನ್ಎ ಮಾದರಿಗಳನ್ನು ಹೋಲಿಕೆ ಮಾಡಲಾಗಿದೆ. ಈ ಪೈಕಿ 159 ಮೃತದೇಹಗಳನ್ನು ಸಂಬಂಧಿತ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ. ಉಳಿದ ಮೃತದೇಹಗಳ ಡಿಎನ್ಎ ಹೋಲಿಕೆ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ" ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.