ವಿಮಾನ ದುರಂತದಲ್ಲಿ 260 ಮಂದಿ ಮೃತ್ಯು; ಇಂದು ಪ್ರಧಾನಿ ಮೋದಿ ಭೇಟಿ
ಅಹ್ಮದಾಬಾದ್: ಗುಜರಾತ್ನ ಅಹ್ಮದಾಬಾದ್ನಿಂದ ಲಂಡನ್ಗೆ ಹೊರಟಿದ್ದ787-8 ಡ್ರೀಮ್ಲೈನರ್ ಏರ್ ಇಂಡಿಯಾ ವಿಮಾನ (ಎಐ171) ದುರಂತದಲ್ಲಿ ಮಡಿದವರ ಸಂಖ್ಯೆ 260ಕ್ಕೇರಿದೆ. ವಿಮಾನದಲ್ಲಿ 230 ಮಂದಿ ಪ್ರಯಾಣಿಕರು ಮತ್ತು 12 ಮಂದಿ ಸಿಬ್ಬಂದಿ ಇದ್ದರು; ಈ ಪೈಕಿ ಒಬ್ಬರು ಮಾತ್ರ ಪವಾಡಸದೃಶವಾಗಿ ಉಳಿದುಕೊಂಡಿದ್ದಾರೆ. ಆದರೆ ವಿಮಾನ ವೈದ್ಯಕೀಯ ಸಿಬ್ಬಂದಿಯ ಹಾಸ್ಟೆಲ್ಗೆ ಅಪ್ಪಳಿಸಿ ಬೆಂಕಿ ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ ದುರಂತದಿಂದ ಒಟ್ಟು ಮೃತಪಟ್ಟವರ ಸಂಖ್ಯೆ 260ಕ್ಕೇರಿದೆ ಎಂದು ಪೊಲೀಸ್ ಆಯುಕ್ತ ವಿಧಿ ಚೌಧರಿ ಪ್ರಕಟಿಸಿದ್ದಾರೆ. ಹಾಸ್ಟೆಲ್ನಲ್ಲಿ ಕನಿಷ್ಠ 50 ಮಂದಿ ಗಾಯಗೊಂಡಿದ್ದಾರೆ.
ಏತನ್ಮಧ್ಯೆ ದುರಂತ ನಡೆದ ಮರುದಿನ ಅಂದರೆ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅಹ್ಮದಾಬಾದ್ಗೆ ಪ್ರಯಾಣ ಬೆಳೆಸಲಿದ್ದು, ದುರಂತ ಸ್ಥಳಕ್ಕೂ ಭೇಟಿ ನೀಡುವ ಸಾಧ್ಯತೆ ಇದೆ.
ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಭಯಾನಕ ಎನಿಸಿದ ದುರಂತದ ಕಾರಣ ಪತ್ತೆ ಮಾಡಲು ಭಾರತ ತನಿಖೆ ಆರಂಭಿಸಿದ್ದು, ಬ್ರಿಟಿಷ್ ಮತ್ತು ಅಮೆರಿಕದ ತನಿಖಾ ತಂಡಗಳು ತನಿಖೆಗೆ ಬೆಂಬಲ ನೀಡಿವೆ. ಅಮೆರಿಕದ ನ್ಯಾಷನಲ್ ಟ್ರಾನ್ಸ್ಪೋರ್ಟ್ ಸೇಫ್ಟಿ ಬೋರ್ಡ್ ಈಗಾಗಲೇ ತನಿಖಾಧಿಕಾರಿಗಳನ್ನು ಕಳುಹಿಸಿಕೊಟ್ಟಿದೆ. ಬ್ರಿಟನ್ ಪ್ರಧಾನಿ ಕೀರ್ ಸ್ಟೆರ್ಮರ್ ಕೂಡಾ ಬ್ರಿಟನ್ ತನಿಖಾ ತಂಡ ಕಳುಹಿಸುವುದಾಗಿ ದೃಢಪಡಿಸಿದ್ದಾರೆ.
ಇನ್ನೊಂದೆಡೆ ರಾಷ್ಟ್ರೀಯ ವಿಪತ್ತು ಸ್ಪಂದನೆ ಪಡೆ (ಎನ್ಡಿಆರ್ಎಫ್) ತುರ್ತು ಸೇವೆಗೆ ಧಾವಿಸಿದ್ದು, ಶುಕ್ರವಾರ ಮುಂಜಾನೆವರೆಗೆ 81 ಮೃತದೇಹಗಳನ್ನು ಅವಶೇಷಗಳ ಅಡಿಯಿಂದ ಹೊರತೆಗೆಯಲಾಗಿದೆ ಎಂದು ಇನ್ಸ್ಪೆಕ್ಟರ್ ವಿನಯ ಕುಮಾರ್ ಹೇಳಿದ್ದಾರೆ.