ಏರ್ ಇಂಡಿಯಾ ವಿಮಾನ ದುರಂತಕ್ಕೆ ಏನು ಕಾರಣ: ವ್ಯಾಪಕ ಚರ್ಚೆ
PC | PTI
ಮುಂಬೈ: ಅಹ್ಮದಾಬಾದ್ ವಿಮಾನ ನಿಲ್ದಾಣದ ಹೊರಗೆ ಏರ್ ಇಂಡಿಯಾ ವಿಮಾನ (ಎಐ 171) ದುರಂತ ಸಂಭವಿಸಿದ ಬೆನ್ನಲ್ಲೇ ಎರಡು ಕಿರು ವಿಡಿಯೊಗಳು ಹರಿದಾಡುತ್ತಿದ್ದು, ವಾಣಿಜ್ಯ ವಿಮಾನ ಚಾಲನೆ ಮಾಡುವ ಪೈಲಟ್ಗಳು ಜಾಲತಾಣಗಳಲ್ಲಿ ಹಲವು ಪ್ರಶ್ನೆಗಳನ್ನೂ ಎತ್ತಿದ್ದಾರೆ.
ವಿಮಾನದ ಲ್ಯಾಂಡಿಂಗ್ ಗೇರ್ ಏಕೆ ಹಿಂದಕ್ಕೆ ತೆಗೆಯಲಿಲ್ಲ? ವಿಮಾನ ಅವಳಿ ಎಂಜಿನ್ ವೈಫಲ್ಯಕ್ಕೆ ತುತ್ತಾಯಿತೇ? ಸಂಭಾವ್ಯ ಇಂಧನ ಕಲಬೆರಕೆ ಅಥವಾ ಪೂರಥಕೆ ತಡೆಯಿಂದ ಎಂಜಿನ್ ವಿಫಲಗೊಂಡಿತೇ? ವಿಮಾನ ಟೇಕಾಫ್ಗೆ ರೆಕ್ಕೆಗಳ ಮೇಲಿನ ಫ್ಲಾಪ್ಗಳನ್ನು ಇಳಿಸಲಾಗಿತ್ತೇ? ಹಕ್ಕಿ ಡಿಕ್ಕಿಯಾಗಿದ್ದು ವಿಮಾನ ಪತನಕ್ಕೆ ಕಾರಣವಾಯಿತೇ ಎಂಬ ಪ್ರಶ್ನೆಗಳನ್ನು ತಜ್ಞರು ಮುಂದಿಟ್ಟಿದ್ದಾರೆ.
ವಿಮಾನ ದುರಂತದ ಅಂತಿಮ ವರದಿಯನ್ನು ಮುಂದಿನ ವರ್ಷದ ಜೂನ್ 12ರ ಒಳಗೆ ಬಿಡುಗಡೆ ಮಾಡಲು ನಿರ್ಧರಿಸಲಾಗಿದ್ದು, ಇದು ಸಂಭಾವ್ಯ ಕಾರಣಗಳು ಮತ್ತು ಪೂರಕ ಅಂಶಗಳ ಬಗ್ಗೆ ವಿವರವಾದ ವಿಶ್ಲೇಷಣೆಯನ್ನು ಇದು ಕೈಗೊಳ್ಳಲಿದೆ. ಆದರೆ ವೈಮಾನಿಕ ವೃತ್ತಿಪರರಿಗೆ ಈ ಎರಡು ವಿಡಿಯೊಗಳು ಹಲವು ಸುಳಿವುಗಳನ್ನು ನೀಡಿವೆ.
"ಟೇಕಾಫ್ ಆದ ಐದು ಸೆಕೆಂಡ್ಗಳ ಒಳಗಾಗಿ ಪೈಲಟ್ ಸಾಮಾನ್ಯವಾಗಿ ಲ್ಯಾಂಡಿಂಗ್ ಗೇರನ್ನು ಮೇಲೆ ಮಾಡುತ್ತಾರೆ" ಎಂದು ವಾಯುಸುರಕ್ಷಾ ತಜ್ಞ ಅಮಿತ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. "ಏರುವ ಧನಾತ್ಮಕ ದರವನ್ನು ತಲುಪಿದ ತಕ್ಷಣ ಲ್ಯಾಂಡಿಂಗ್ ಗೇರ್ ಹಿಂದಕ್ಕೆ ಮಾಡಬೇಕು" ಎನ್ನುವುದು ಕಾರ್ಯಾಚರಣೆ ನಿರ್ದೇಶಕ ಮತ್ತು ವಾಯುಸುರಕ್ಷಾ ನಿರ್ದೇಶಕ ಹುದ್ದೆಯಂಥ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ ಏರ್ಇಂಡಿಯಾದ ಮಾಜಿ ಅಧಿಕಾರಿ ಕ್ಯಾಪ್ಟನ್ ಮನೋಜ್ ಹಾತಿ ಅವರ ಅಭಿಮತ.
ಲ್ಯಾಂಡಿಂಗ್ ಗೇರ್, ಎಳೆಯುವಿಕೆ ಮತ್ತು ಇಂಧನ ಬಳಕೆಯನ್ನು ಹೆಚ್ಚಿಸುತ್ತದೆ ಹಾಗೂ ವಿಮಾನದ ವೇಗವನ್ನು ಕಡಿಮೆ ಮಾಡುತ್ತದೆ. ಲ್ಯಾಂಡಿಂಗ್ ಗೇರ್ ಹಿಂದಕ್ಕೆ ಮಾಡುವುದರಿಂದ ಸುಲಲಿತ ಏರೊಡೈನಾಮಿಕ್ ಹರಿವಿಗೆ ಅವಕಾಶವಾಗುತ್ತದೆ ಹಾಗೂ ಇದು ವಿಮಾನ ಏರಲು ನೆರವಾಗುತ್ತದೆ. ಆದರೆ ನೆಲಮಟ್ಟದಿಂದ 400 ಅಡಿ ಮೇಲೆ ಹೋದ ಬಳಿಕವೂ ವಿಮಾನದ ಲ್ಯಾಂಡಿಂಗ್ ಗೇರ್ ಮೇಲಿದ್ದುದನ್ನು ವಿಡಿಯೊ ತೋರಿಸುತ್ತದೆ. ಆದರೆ ಡಿಜಿಸಿಎ ಹೇಳಿಕೆ ಪ್ರಕಾರ ವಿಮಾನ ಅವಳಿ ಎಂಜಿನ್ ವೈಫಲ್ಯಕ್ಕೆ ತುತ್ತಾಗಿರುವ ಸಾಧ್ಯತೆ ಇದೆ. ಪೈಲಟ್ ಲ್ಯಾಂಡಿಂಗ್ ಗೇರ್ ಹಿಂಪಡೆಯಲು ಮುಖ್ಯವಾಗಿ ಅವಳಿ ಎಂಜಿನ್ ವೈಫಲ್ಯ ಅಥವಾ ಹಕ್ಕಿ ಡಿಕ್ಕಿ ಕಾರಣವಾಗಿರಬಹುದು ಎನ್ನಲಾಗಿದೆ. ವಿಮಾನ ರನ್ವೇಯಿಂದ ಮೇಲೇಳುವ ಸಂದರ್ಭದಲ್ಲಿ ದೂಳಿನ ದಟ್ಟಣೆಯನ್ನು ನೋಡಿದರೆ ಅವಳಿ ಇಂಜಿನ್ ಸಮಸ್ಯೆ ಕಾರಣವಿರಬಹುದು ಎಂದು ಸುರಕ್ಷಾ ತಜ್ಞ ಕ್ಯಾಪ್ಟನ್ ಅಮಿತ್ ಸಿಂಗ್ ಹೇಳುತ್ತಾರೆ.