ನಿಧಾನಗತಿಯ ಶೋಧ ಕಾರ್ಯಾಚರಣೆ: ಏರ್ ಇಂಡಿಯಾ ಅಪಘಾತ ಸಂತ್ರಸ್ತರ ಕುಟುಂಬಗಳಿಂದ ಅಸಮಾಧಾನ
Photo credit: PTI
ಅಹಮದಾಬಾದ್: ಏರ್ ಇಂಡಿಯಾ ಬೋಯಿಂಗ್ ಕಂಪನಿ 787 ಜೆಟ್ ಅಪಘಾತದಲ್ಲಿ ಮೃತರಾದ/ಕಾಣೆಯಾದವರ ಸಂಬಂಧಿಕರು ದುರಂತದ ಕಾರಣ ಮತ್ತು ನಿಧಾನವಾಗಿ ನಡೆಯುತ್ತಿರುವ ಶೋಧ ಕಾರ್ಯಾಚರಣೆಗಳ ಬಗ್ಗೆ ಮಾಹಿತಿಯ ಕೊರತೆಯಿಂದ ನಿರಾಶೆಗೊಂಡಿದ್ದಾರೆ ಎಂದು ವರದಿಯಾಗಿದೆ.
ಬಹುತೇಕ ಸಂತ್ರಸ್ತರ ಮಾದರಿಗಳು ಇನ್ನೂ ಡಿಎನ್ಎ ಪರೀಕ್ಷೆಗಾಗಿ ಕಾಯುತ್ತಿವೆ. ಅಂತಿಮ ಸಾವಿನ ಸಂಖ್ಯೆ ಇನ್ನೂ ಬಾಕಿ ಇದ್ದು, ಡಿಎನ್ಎ ಮಾದರಿಗಳ ಮೂಲಕ 80 ಮೃದೇಹಗಳ ಗುರುತು ಪತ್ತೆ ಹಚ್ಚಲಾಗಿದೆ. 33 ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದು PTI ವರದಿ ತಿಳಿಸಿದೆ.
"ಮೃತದೇಹಗಳನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಲು ನಾವು ಡಿಎನ್ಎ ಹೊಂದಾಣಿಕೆ ಪ್ರಕ್ರಿಯೆಯನ್ನು ತ್ವರಿತಗೊಳಿಸುತ್ತಿದ್ದೇವೆ. ಪ್ರಕ್ರಿಯೆಯನ್ನು ಸುಗಮಗೊಳಿಸಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ" ಎಂದು ಅಹಮದಾಬಾದ್‌ನ ಸ್ಥಳೀಯ ಆಸ್ಪತ್ರೆಯ ಅಧಿಕಾರಿ ಡಾ. ರಜನೀಶ್ ಪಟೇಲ್ ಹೇಳಿದರು.
ಗುರುವಾರ ವಿಮಾನವು ಅಹಮದಾಬಾದ್‌ನಲ್ಲಿ ಜನನಿಬಿಡ ವಸತಿ ಪ್ರದೇಶಕ್ಕೆ ಅಪ್ಪಳಿಸಿದಕ್ಕೆ ಕಾರಣವನ್ನು ಕಂಡುಹಿಡಿಯಲು ವಿಮಾನಯಾನ ಅಧಿಕಾರಿಗಳು ಏರ್ ಇಂಡಿಯಾ ವಿಮಾನದ ಅವಶೇಷಗಳನ್ನು ಪರಿಶೀಲಿಸುತ್ತಿದ್ದಾರೆ. ವಿಮಾನದಲ್ಲಿದ್ದ 242 ಜನರಲ್ಲಿ ಒಬ್ಬರನ್ನು ಹೊರತುಪಡಿಸಿ ಎಲ್ಲರೂ ಸಾವನ್ನಪ್ಪಿದ್ದು, ಜೊತೆಗೆ ಅಪಘಾತದ ಸ್ಥಳದಲ್ಲಿ ಮೃತಪಟ್ಟವರ ಸಂಪೂರ್ಣ ಸಂಖ್ಯೆ ಇನ್ನೂ ಲಭ್ಯವಾಗಿಲ್ಲ.
ಬಿ.ಜೆ. ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಹಾಸ್ಟೆಲ್ ಊಟದ ಹಾಲ್ ನಲ್ಲಿ ಆಹಾರ ಸೇವಿಸುತ್ತಿದ್ದಾಗ, ವಿಮಾನ ಬಂದು ಕಟ್ಟಡಕ್ಕೆ ಅಪ್ಪಳಿಸಿದ್ದು, ಅಲ್ಲಿದ್ದವರ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯಲು ಅವರ ಕುಟುಂಬಗಳು ಸ್ಥಳದಲ್ಲಿ ಜಮಾಯಿಸಿವೆ.
20 ರ ಹರೆಯದ ಯುವತಿ ಪಾಯಲ್ ತುಷಾರ್ ಠಾಕೂರ್, ವೈದ್ಯಕೀಯ ಕಾಲೇಜಿನ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತಿದ್ದ ತನ್ನ ತಾಯಿಯ ಬಗ್ಗೆ ಮಾಹಿತಿಗಾಗಿ ಇನ್ನೂ ಕಾಯುತ್ತಿರುವುದಾಗಿ ಹೇಳಿದ್ದಾರೆ.
"ನಾವು ಬಡವರು, ಆದ್ದರಿಂದ ನಮಗೆ ಮಾಹಿತಿ ನೀಡುವ ಬಗ್ಗೆ ಯಾರೂ ಕಾಳಜಿ ವಹಿಸುತ್ತಿಲ್ಲ. ನಾವು ಆಘಾತಕ್ಕೊಳಗಾಗಿದ್ದೇವೆ, ತಿನ್ನಲು ಅಥವಾ ಕುಡಿಯಲು ಸಾಧ್ಯವಾಗುತ್ತಿಲ್ಲ. ನಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಾಗ ಪರಿಹಾರ ಯಾರಿಗೆ ಬೇಕು?" ಎಂದು ಪಾಯಲ್ ಭಾವುಕರಾಗಿ ಪ್ರಶ್ನಿಸುತ್ತಾರೆ.
ಅಪಘಾತದಲ್ಲಿ ತನ್ನ ಅತ್ತಿಗೆ ನುಸ್ರತ್ ಜಹಾನ್ ರನ್ನು ಕಳೆದುಕೊಂಡಿರುವ 35 ವರ್ಷದ ಮುಹಮ್ಮದ್ ಓವೆಸ್ ಅವರು, ತಮ್ಮ ಮೃತ ಸಂಬಂಧಿಯನ್ನು ಡಿಎನ್‌ಎ ಹೊಂದಾಣಿಕೆಯೊಂದಿಗೆ ಇನ್ನೂ ಗುರುತಿಸಲಾಗಿಲ್ಲ ಎಂದು ತಿಳಿಸಿದ್ದಾರೆ. “ದುರಂತದ ಪ್ರಮಾಣವನ್ನು ಗಮನಿಸಿದರೆ ನಮಗೆ ಕಾಯುವುದನ್ನು ಬಿಟ್ಟು ಬೇರೆ ದಾರಿಯಿಲ್ಲ” ಎಂದು ಅವರು ಹೇಳಿದರು.
ಡಿಎನ್‌ಎ ಮಾದರಿ ಪ್ರಕ್ರಿಯೆಯನ್ನು ಸುಗಮಗೊಳಿಸಲು, ಸ್ಥಳೀಯ ಅಧಿಕಾರಿಗಳು 12 ತಂಡಗಳು ಪಾಳಿಯಲ್ಲಿ ಕೆಲಸ ಮಾಡುತ್ತಿವೆ, 24 ಗಂಟೆಗಳ ಕಾಲ ಡಿಎನ್‌ಎ ಪರೀಕ್ಷೆಯನ್ನು ನಡೆಸುತ್ತಿವೆ. ಆದರೆ ಕೆಲವು ಸಂಗ್ರಹಣಾ ಪ್ರಯತ್ನಗಳು ಅಸ್ತವ್ಯಸ್ತವಾಗಿವೆ, ಒಂದೇ ದೇಹದ ಚೀಲದಲ್ಲಿ ಒಂದಕ್ಕಿಂತ ಹೆಚ್ಚು ಜನರ ಅವಶೇಷಗಳ ನಿದರ್ಶನ ಕಂಡುಬಂದಿದೆ ಎಂದು ಅವರು ಹೇಳಿದರು.
ಗುಜರಾತ್ ರಾಜ್ಯ ಆರೋಗ್ಯ ಇಲಾಖೆಯು ಅಪಘಾತ ಸ್ಥಳದ ಬಳಿಯಿರುವ ಆಘಾತ ಕೇಂದ್ರದಲ್ಲಿ 100 ಆರೋಗ್ಯ ಕಾರ್ಯಕರ್ತರು ಸೇರಿದಂತೆ 855 ಕ್ಕೂ ಹೆಚ್ಚು ಆರೋಗ್ಯ ಸಿಬ್ಬಂದಿಯನ್ನು ನಿಯೋಜಿಸಿದೆ. ಸಂತ್ರಸ್ತ ಕುಟುಂಬಗಳಿಗೆ ಸಹಾಯ ಮಾಡಲು ಕೌನ್ಸೆಲಿಂಗ್ ಬೆಂಬಲವನ್ನು ಸಹ ಒದಗಿಸಲಾಗಿದೆ.
"ಒಟ್ಟು ಸಾವಿನ ಸಂಖ್ಯೆಯನ್ನು ನಿರ್ಧರಿಸಲು ಸಮಯ ತೆಗೆದುಕೊಳ್ಳುತ್ತದೆ" ಎಂದು ಗುಜರಾತ್ ಸರ್ಕಾರದ ಪರಿಹಾರ ಆಯುಕ್ತ ಅಲೋಕ್ ಕುಮಾರ್ ಪಾಂಡೆ ರವಿವಾರ ಹೇಳಿದರು. "ಸಂತ್ರಸ್ತರನ್ನು ಗುರುತಿಸಲು ಮತ್ತು ಅವರ ಕುಟುಂಬಗಳಿಗೆ ತಿಳಿಸಲು ಶ್ರದ್ಧೆಯಿಂದ ಕೆಲಸ ಮಾಡುತ್ತಿರುವುದರಿಂದ ತಾಳ್ಮೆಯಿಂದಿರಿ ಎಂದು ನಾವು ಕುಟುಂಬಸ್ಥರಿಗೆ ವಿನಂತಿಸುತ್ತೇವೆ." ಎಂದು ಅವರು ಹೇಳಿದ್ದಾರೆ.