ಬಾಗಿಲಿನ ದೋಷ | ಬ್ಯುಸಿನಸ್ ಕ್ಲಾಸ್ ಇಲ್ಲದೆ 8 ಗಂಟೆ ವಿಳಂಬವಾಗಿ ಸಂಚರಿಸಿದ ಏರ್ ಇಂಡಿಯಾ ವಿಮಾನ
ಏರ್ ಇಂಡಿಯಾ ವಿಮಾನ | PTI
ಹೊಸದಿಲ್ಲಿ, ಜು. 25: ಬ್ಯುಸಿನಲ್ ಕ್ಲಾಸ್ ವಿಭಾಗದ ಬಾಗಿಲು ಕಾರ್ಯ ನಿರ್ವಹಿಸದೇ ಇರುವುದರಿಂದ ಸ್ಯಾನ್ ಫ್ರಾನ್ಸಿಸ್ಕೊ-ಬೆಂಗಳೂರು ಏರ್ ಇಂಡಿಯಾ ವಿಮಾನ 8 ಗಂಟೆ ವಿಳಂಬವಾಗಿ ಸಂಚರಿಸಿದೆ.
ವಿಮಾನವನ್ನು ಶುಚಿಗೊಳಿಸುತ್ತಿರುವ ಕಾರಣಕ್ಕೆ ವಿಳಂಬವಾಗಿದೆ ಎಂದು ಗಂಟೆಗಳ ಕಾಲ ಪ್ರಯಾಣಿಕರಿಗೆ ತಪ್ಪು ಮಾಹಿತಿ ನೀಡಲಾಗಿದೆ ಎಂದು ಹೇಳಲಾಗಿದೆ.
ಜುಲೈ 22ರಂದು ಮುಂಜಾನೆ 5.45ಕ್ಕೆ ಅಂತಿಮವಾಗಿ ವಿಮಾನ ಹಾರಾಟ ಆರಂಭಿಸುವ ಮುನ್ನ ಬ್ಯುಸಿನಸ್ ಹಾಗೂ ಪ್ರಿಮಿಯಂ ಇಕಾನಮಿ ಕ್ಲಾಸ್ ಗಳಿಗೆ ಟೇಪ್ ಹಾಕಿ ನಿರ್ಬಂಧಿಸಲಾಗಿತ್ತು ಎಂದು ಪ್ರಯಾಣಿಕರು ಹೇಳಿದ್ದಾರೆ.
ಇಕಾನಮಿ ಕ್ಲಾಸ್ ನಲ್ಲಿ ಪ್ರಯಾಣಿಸಲು ನಿರಾಕರಿಸಿದ ಐವರು ಬ್ಯುಸಿನನೆಸ್ ಕ್ಲಾಸ್ ನ ಪ್ರಯಾಣಿಕರು ಆ ವಿಮಾನದಲ್ಲಿ ಪ್ರಯಾಣಿಸಲಿಲ್ಲ. ಇತರ 25 ಮಂದಿ ಪ್ರಯಾಣಿಕರಿಗೆ ಇಕಾನಮಿ ಕ್ಲಾಸ್ ನಲ್ಲಿ ಸೀಟುಗಳನ್ನು ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಈ ಘಟನೆಯನ್ನು ಏರ್ ಇಂಡಿಯಾ ಹೇಳಿಕೆಯಲ್ಲಿ ದೃಢಪಡಿಸಿದೆ. ‘‘ಜುಲೈ 21ರಂದು ಸ್ಯಾನ್ ಪ್ರಾನ್ಸಿಸ್ಕೊದಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ಎಐ 176 ವಿಮಾನದ ಒಂದು ಬಾಗಿಲಿಗೆ ಸಂಬಂಧಿಸಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು’’ ಎಂದು ಅದು ಹೇಳಿದೆ.
ದೋಷವನ್ನು ಕೂಡಲೇ ಪತ್ತೆ ಹಚ್ಚಲು ಸಾಧ್ಯವಾಗದೇ ಇರುವುದರಿಂದ, ಬಾಗಿಲು ನಿಷ್ಕ್ರಿಯ ಎಂದು ಘೋಷಿಸಲಾಗಿತ್ತು. ಸುರಕ್ಷಾ ಶಿಷ್ಟಾಚಾರಕ್ಕೆ ಅನುಗುಣವಾಗಿ ಕೆಲವು ಪ್ರಯಾಣಿಕರನ್ನು ಇಕಾನಮಿ ಕ್ಲಾಸ್ ಗೆ ವರ್ಗಾಯಿಸಲಾಗಿತ್ತು ಎಂದು ಏರ್ ಇಂಡಿಯಾ ತಿಳಿಸಿದೆ.