ಏರ್ ಇಂಡಿಯಾ ವಿಮಾನ ದುರಂತ | ಮಾಜಿ ಸಿಎಂ ವಿಜಯ್ ರೂಪಾನಿ ಸಹಿತ 32 ಮೃತದೇಹಗಳ ಗುರುತು ಪತ್ತೆ
ಸಿಎಂ ವಿಜಯ್ ರೂಪಾನಿ | PC : PTI
ಹೊಸದಿಲ್ಲಿ: ಅಹ್ಮದಾಬಾದ್ ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ಅವಘಾತದಲ್ಲಿ ಮೃತಪಟ್ಟ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರ ಮೃತದೇಹವನ್ನು ಡಿಎನ್‌ಎ ಪರೀಕ್ಷೆ ಮೂಲಕ ಗುರುತಿಸಲಾಗಿದೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.
ಇದುವರೆಗೆ, ಮೃತಪಟ್ಟ 32 ಮಂದಿಯ ಮೃತದೇಹಗಳನ್ನು ಡಿಎನ್‌ಎ ಪರೀಕ್ಷೆ ಮೂಲಕ ಗುರುತಿಸಲಾಗಿದೆ. 14 ಮೃತದೇಹಗಳನ್ನು ಅವರವರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದು ಅಹ್ಮದಾಬಾದ್‌ನ ಸಿವಿಲ್ ಆಸ್ಪತ್ರೆಯ ಹೆಚ್ಚುವರಿ ಸೂಪರಿಂಟೆಂಡೆಂಟ್ ಡಾ. ರಜನೀಶ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಗುಜರಾತ್ ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರ ಡಿಎನ್‌ಎ ಮಾದರಿ ಅವರ ಕುಟುಂಬದ ಸದಸ್ಯರ ಡಿಎನ್‌ಎ ಮಾದರಿಯೊಂದಿಗೆ ರವಿವಾರ ಬೆಳಗ್ಗೆ 11 ಗಂಟೆಗೆ ಹೋಲಿಕೆಯಾಗಿದೆ ಎಂದು ಗುಜರಾತ್‌ನ ಗೃಹ ಸಚಿವ ಹರ್ಷ ಸಂಘ್ವಿ ಅವರು ಗಾಂಧಿನಗರದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ರೂಪಾನಿ ಅವರ ಕುಟುಂಬದ ಸದಸ್ಯರನ್ನು ಭೇಟಿಯಾಗಿದ್ದಾರೆ ಹಾಗೂ ಡಿಎನ್‌ಎ ಮಾದರಿ ಹೋಲಿಕೆಯಾಗಿರುವ ಕುರಿತು ಮಾಹಿತಿ ನೀಡಿದ್ದಾರೆ ಎಂದು ರಾಜ್ಯ ಆರೋಗ್ಯ ಸಚಿವ ಋಷಿಕೇಶ್ ಪಟೇಲ್ ತಿಳಿಸಿದ್ದಾರೆ.
‘‘ಇದುವರೆಗೆ 32 ಡಿಎನ್‌ಎ ಮಾದರಿಗಳು ಹೋಲಿಕೆಯಾಗಿವೆ. 14 ಮೃತದೇಹಗಳನ್ನು ಈಗಾಗಲೇ ಸಂಬಂಧಿತ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ. ಮೃತರು ಉದಯಪುರ, ವಡೋದರಾ, ಖೇಡಾ, ಮೆಹ್ಸ್ನಾ, ಅಹ್ಮದಾಬಾದ್ ಹಾಗೂ ಬೋಟಾಡ್ ಜಿಲ್ಲೆಗೆ ಸೇರಿದವರು’’ ಎಂದು ಸರಕಾರ ಸ್ವಾಮಿತ್ವದ ಬಿ.ಜೆ. ವೈದ್ಯಕೀಯ ಕಾಲೇಜಿನ ಶಶ್ತ್ರಚಿಕತ್ಸಾ ಪ್ರಾಧ್ಯಾಪಕ ರಜನೀಶ್ ಪಟೇಲ್ ತಿಳಿಸಿದ್ದಾರೆ.