ಅಹ್ಮದಾಬಾದ್ ವಿಮಾನ ದುರಂತ: ತನಿಖೆಗೆ ಉನ್ನತ ಮಟ್ಟದ ಸಮಿತಿ ರಚಿಸಿದ ಕೇಂದ್ರ ಸರಕಾರ
Photo credit: PTI
ಹೊಸದಿಲ್ಲಿ : ಅಹ್ಮದಾಬಾದ್‌ನಲ್ಲಿ ಸಂಭವಿಸಿದ ವಿಮಾನ ದುರಂತ ಘಟನೆಗೆ ಸಂಬಂಧಿಸಿ ತನಿಖೆಗೆ ಕೇಂದ್ರ ಸರಕಾರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ಮೂರು ತಿಂಗಳೊಳಗೆ ಈ ಕುರಿತು ವರದಿಯನ್ನು ಸಲ್ಲಿಸುವಂತೆ ಸೂಚಿಸಿದೆ.
ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ನೇತೃತ್ವದ ಉನ್ನತ ಮಟ್ಟದ ಸಮಿತಿಯನ್ನು ಕೇಂದ್ರ ಸರಕಾರ ರಚಿಸಿದೆ. ಘಟನೆಗೆ ಮೂಲ ಕಾರಣವನ್ನು ಸಮಿತಿಯು ಪತ್ತೆಹಚ್ಚಲಿದ್ದು, ಭವಿಷ್ಯದಲ್ಲಿ ಇಂಥ ಘಟನೆಗಳನ್ನು ಎದುರಿಸಲು ಸಮಗ್ರ ಮಾರ್ಗಸೂಚಿಗಳನ್ನು ನೀಡಲಿದೆ.
ʼಏರ್ ಇಂಡಿಯಾ ವಿಮಾನ AI-171 ಅವಘಡಕ್ಕೆ ಸಂಬಂಧಿಸಿ ಕಾರಣಗಳನ್ನು ಪರಿಶೀಲಿಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ಇತರ ತನಿಖಾ ಸಂಸ್ಥೆಗಳು ನಡೆಸುವ ತನಿಖೆ ಜೊತೆ ಈ ಸಂಸ್ಥೆ ಮಧ್ಯಪ್ರವೇಶಿಸುವುದಿಲ್ಲ. ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟಲು ಪ್ರಮಾಣೀಕೃತ ಕಾರ್ಯವಿಧಾನಗಳನ್ನು ರೂಪಿಸುವತ್ತ ಸಮಿತಿಯು ಗಮನಹರಿಸಲಿದೆʼ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.
ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ಅಥವಾ ಜಂಟಿ ಕಾರ್ಯದರ್ಶಿ, ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ, ಗುಜರಾತ್ ಗೃಹ ಇಲಾಖೆ ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ಪ್ರಾಧಿಕಾರದ ಪ್ರತಿನಿಧಿಗಳು, ಅಹ್ಮದಾಬಾದ್ ಪೊಲೀಸ್ ಆಯುಕ್ತರು, ಭಾರತೀಯ ವಾಯುಪಡೆ ತಪಾಸಣೆ ಮತ್ತು ಸುರಕ್ಷತೆ ಇಲಾಖೆ ಡಿಜಿ, ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯದ ಡಿಜಿ, ಗುಪ್ತಚರ ಬ್ಯೂರೋದ ವಿಶೇಷ ನಿರ್ದೇಶಕರು ಮತ್ತು ವಿಧಿವಿಜ್ಞಾನ ಸೇವೆಗಳ ನಿರ್ದೇಶನಾಲಯದ ನಿರ್ದೇಶಕರು ಸಮಿತಿಯಲ್ಲಿದ್ದಾರೆ.
ವಿಮಾನ ಅವಘಡದ ಕುರಿತು ಈಗಾಗಲೇ ಎಎಐಬಿ ತನಿಖೆ ನಡೆಸುತ್ತಿದೆ. ಸ್ಥಳಕ್ಕೆ ಎನ್ಐಎ ತಂಡ ತೆರಳಿ ಪರಿಶೀಲನೆ ನಡೆಸುತ್ತಿದೆ.